ಸುಂಟಿಕೊಪ್ಪ, ಫೆ. ೨: ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಕ್ಕಳ ಸಂತೆಮೇಳ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಮಕ್ಕಳ ಸಂತೆ ಮೇಳದಲ್ಲಿ ಮಕ್ಕಳ ವ್ಯಾಪಾರ, ವಹಿವಾಟು ಜ್ಞಾನದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಬಗೆಯ ತರಕಾರಿಗಳು, ಹಣ್ಣು ಹಂಪಲುಗಳು, ಮನೆಯಿಂದ ತಯಾರಿಸಿದ ಸಿಹಿ ಖಾದ್ಯ ತಿಂಡಿಗಳನ್ನು ಮಾರಾಟ ಮಾಡುವಲ್ಲಿ ಮಕ್ಕಳು ತಲ್ಲೀನರಾಗಿದ್ದರು.
ಶಾಲಾ ಶಿಕ್ಷಕರು, ಪೋಷಕರು, ಸಾರ್ವಜನಿಕರು ಮಕ್ಕಳ ವ್ಯಾಪಾರ ಶೈಲಿಗೆ ಮನಸೋತು ವಸ್ತುಗಳನ್ನು ಖರೀದಿಸಿದರು. ಇದೇ ಸಂದರ್ಭ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮಕ್ಕಳ ಕೈಯಿಂದ ಅರಳಿದ ವಿವಿಧ ರೀತಿಯ ವಿಜ್ಞಾನದ ಕೌತುಕದ ದೃಶ್ಯಾವಳಿಗಳು ಮನಸೂರೆಗೊಂಡಿತು. ಕನ್ನಡ, ವಿಜ್ಞಾನ, ಇಂಗ್ಲಿಷ್, ಹಿಂದಿ ವಾಣಿಜ್ಯ ವಿಷಯಗಳ ಕುರಿತಾದ ವಸ್ತು ಪ್ರದರ್ಶನವು ಮಕ್ಕಳ ಕೈಯಿಂದ ಅರಳಿದ್ದವು.
ರಾಕೆಟ್ ಉಡಾವಣೆ, ನೀರಿನ ಬಳಕೆ, ಮನೆಗಳ ನಿರ್ಮಾಣ ಶೈಲಿ, ಕನ್ನಡದ ಕವಿಗಳ ಚಿತ್ರಗಳು, ವ್ಯಾಕರಣ ರಚಿತ ದೃಶ್ಯಾವಳಿ ಸೇರಿದಂತೆ ಇನ್ನಿತರ ವಸ್ತು ಪ್ರದರ್ಶನಗಳು ಮೆರುಗನ್ನು ನೀಡಿದವು. ಶಾಲಾ ವ್ಯವಸ್ಥಾಪಕ ವಿಜಯ್ ಕುಮಾರ್ ಹಾಗೂ ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.