ಮಡಿಕೇರಿ, ಫೆ. ೨: ಮರಗೋಡು ಗೌಡ ಈವಿಂಗ್ ಸ್ಟಾರ್ ವತಿಯಿಂದ ಇದೇ ಮೊದಲ ಬಾರಿಗೆ ಮುಂದಿನ ಏ.೨೬ರಿಂದ ಹದಿನೈದು ದಿನಗಳ ಕಾಲ ಗ್ರಾಮದ ಭಾರತೀಯ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡ ಈವಿಂಗ್ ಸ್ಟಾರ್ ಅಧ್ಯಕ್ಷ ರೋಷನ್ ಕಟ್ಟೆಮನೆ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೌಡ ಸಮುದಾಯದ ೧೦೦ ರಿಂದ ೧೫೦ ಕುಟುಂಬ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಂಡಗಳ ಹೆಸರು ನೋಂದಣಿಗೆ ಏಪ್ರಿಲ್ ೧೦ರವರೆಗೆ ಕಾಲಾವಕಾಶವನ್ನು ನೀಡಲಾಗಿದೆಯೆಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪ್ರತಿನಿತ್ಯ ೧೦ ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯ ೬ ಓವರ್ ಆಗಿರುತ್ತದೆ. ಪ್ರೀ ಕ್ವಾರ್ಟರ್ ಹಂತದ ಪಂದ್ಯಗಳು ೮ ಓವರ್ ಹಾಗೂ ಕ್ವಾರ್ಟರ್ ಫೈನಲ್ ನಂತರದ ಎಲ್ಲಾ ಪಂದ್ಯಗಳು ೧೦ ಓವರ್‌ಗಳದ್ದಾಗಿದ್ದು, ಪ್ರೀ ಕ್ವಾರ್ಟರ್ ನಂತರದ ಎಲ್ಲಾ ಪಂದ್ಯಗಳನ್ನು ಪವರ್ ಪ್ಲೇ ಮೂಲಕ ನಡೆಸಲಾಗುತ್ತದೆಂದು ಎಂದರು.
ಪಂದ್ಯಾವಳಿಯನ್ನು ೧೦ ಲಕ್ಷ ರೂ. ಅಂದಾಜು ಮೊತ್ತದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಒಟ್ಟು ಬಹುಮಾನದ ಮೊತ್ತ ೩ ಲಕ್ಷ ರೂ.ಗಳಾಗಿರುತ್ತದೆ. ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಸೇರಿದಂತೆ ಟ್ರೋಫಿಯನ್ನು ನೀಡಲಾಗುತ್ತದೆ.
ಕ್ವಾರ್ಟರ್ ಫೈನಲ್ ಹಂತವನ್ನು ತಲುಪುವ ಪ್ರತಿ ತಂಡಕ್ಕೂ ನಗದು ಬಹುಮಾನವನ್ನು ನೀಡಲಾಗುತ್ತದೆ. ಇದರೊಂದಿಗೆ ಪಂದ್ಯ ಪುರುಷೋತ್ತಮ, ಉತ್ತಮ ಬ್ಯಾಟಿಂಗ್, ಉತ್ತಮ ಬೌಲರ್, ಸರಣಿ ಪುರುಷೋತ್ತಮ, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ಮಹಿಳಾ ಆಟಗಾರ್ತಿ, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನೀಡಲಾಗುತ್ತದೆಂದು ವಿವರಿಸಿದರು.
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ನೋಂದಣಿ ಶುಲ್ಕವಾಗಿ ೩ ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ. ತಂಡಗಳ ಹೆಸರು ನೋಂದಣಿಗೆ ಮಗೇರನ ರಂಜು ಮೊ.೮೭೬೨೨೪೯೩೧೭, ಬೆಳ್ಳೂರು ಮುನ್ನ ಮೊ.೯೪೮೩೬೭೮೩೭೭ನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಟ್ಟೆಮನೆ ರೋಷನ್ ಮೊ.೯೪೪೯೩೬೧೯೩೩ ಹಾಗೂ ಕರ್ಣಯ್ಯನ ವಿವೇಕ್ ಮೊ.೯೯೦೨೪೯೭೮೧೭ ನ್ನು ಸಂಪರ್ಕಿಸಬಹುದೆAದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌಡ ಈವಿಂಗ್ ಸ್ಟಾರ್ ಉಪಾಧ್ಯಕ್ಷರಾದ ಪರ್ಲಕೋಟಿ ಸತ್ಯ, ಕಾರ್ಯದರ್ಶಿ ಕರ್ಣಯ್ಯನ ವಿವೇಕ್, ಖಜಾಂಚಿ ಬೈಮನ ಶರ್ವಿನ್, ಸದಸ್ಯ ಕೊಂಪುಳಿರ ಹೇಮರಾಜ್ ಉಪಸ್ಥಿತರಿದ್ದರು.