ಕಣಿವೆ, ಫೆ. ೨: ಕೆ.ಎಸ್. ನರಸಿಂಹಸ್ವಾಮಿ ಬರೆದ ದಾಂಪತ್ಯ ಗೀತೆಗಳು ಮೈಸೂರು ಮಲ್ಲಿಗೆ ಹೂವಿನ ಪರಿಮಳದಷ್ಟೇ ಸೊಗಸಾಗಿದ್ದವು ಎಂದು ಸಾಹಿತಿ ಕಣಿವೆ ಭಾರಧ್ವಾಜ್ ಹೇಳಿದರು.
ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ "ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣೆ" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆ.ಎಸ್. ನರಸಿಂಹಸ್ವಾಮಿ ಬರೆದಂತಹ ಗೀತೆಗಳು ಇಂದಿಗೂ ಹಾಗೂ ಎಂದೆAದಿಗೂ ಕೇಳುಗರ ಮನವನ್ನು ತಣಿಸುತ್ತವೆ ಎಂದರು.
ಬದುಕಿನಲ್ಲಿ ಬಡತನವಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೇ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮೇರುಕವಿಯಾಗಿ ನಮ್ಮೊಡನೆ ಇದ್ದಾರೆ ಎಂದು ಭಾರಧ್ವಾಜ್ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ನುಡಿಗಳಾಡಿದ ಕುಶಾಲನಗರದ ನಿವೃತ್ತ ಶಿಕ್ಷಕ ಉ.ರಾ. ನಾಗೇಶ್, ಕೆ.ಎಸ್. ನರಸಿಂಹಸ್ಚಾಮಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಕವಿ.
ಬದುಕಿನಲ್ಲಿ ಬಡತನವಿದ್ದರೂ ಕೂಡ ತಮ್ಮತನ ಬಿಡಲಾಗದ ಕೆ.ಎಸ್.ನ ತಮ್ಮ ಕಲ್ಪನಾ ಲೋಕದಲ್ಲಿ ತಲ್ಲೀನರಾಗಿ ಬರೆದ ಅದೆಷ್ಟೋ ಪದ್ಯಗಳು ಇಂದು ಹೆಸರಾಂತ ಗೀತೆಗಳಾಗಿವೆ.
ಮೈಸೂರು ಮಲ್ಲಿಗೆ ಕವನ ಸಂಕಲನ ಕವಿಗೆ ಅಗಾಧ ಮಟ್ಟದ ಹೆಸರು ತಂದು ಕೊಟ್ಟ ಮೇರು ಸಂಕಲನ.
ಕೊನೆಗೆ ಸ್ವಂತ ಮನೆಯೂ ಇಲ್ಲದ ಕೆ.ಎಸ್.ನ ತಮ್ಮ ಪತ್ನಿಯ ಆರೋಗ್ಯಕ್ಕಾಗಿ ತಮ್ಮ ಕವಿತೆಗಳ ಬರವಣಿಗೆಯ ಕಾಪಿಯ ಹಕ್ಕನ್ನು ಮಾರಾಟ ಮಾಡುತ್ತಾರೆ ಎಂದರು.
ಬರಹಗಾರ್ತಿ ರಾಣಿ ವಸಂತ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿ ಹೊಂದಲು ಕೆ.ಎಸ್. ನರಸಿಂಹಸ್ವಾಮಿ ಅವರ ಕವನ ಸಂಕಲನಗಳನ್ನು ಓದಲು ಕರೆ ಕೊಟ್ಟರಲ್ಲದೇ ಕೆ.ಎಸ್. ನರಸಿಂಹಸ್ವಾಮಿ ಕಾಲಘಟ್ಟದಲ್ಲಿನ ಕವಿಗಳು ಎಷ್ಟೇ ಸಾಹಿತ್ಯ ಕೃಷಿ ಮಾಡಿದರೂ ಕೂಡ ಬಡತನವನ್ನು ಗೆಲ್ಲಲಾಗಲಿಲ್ಲ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಬಡತನವನ್ನೇ ಕಾಣದ ಸಾಹಿತಿಗಳಿದ್ದಾರೆ ಎಂದರು.
ಕುವೆAಪು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆ.ಎಸ್.ನ ಕುರಿತು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು.
ಸಾಹಿತ್ಯಾಸಕ್ತರ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಇದೇ ಸಂದರ್ಭ ವೇದಿಕೆ ವತಿಯಿಂದ ವಾಗ್ಮಿ ಉ.ರಾ. ನಾಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.