ಶನಿವಾರಸಂತೆ, ಫೆ. ೩: ಸಮೀಪದ ಅವರೆದಾಳು ಗ್ರಾಮದ ಮುಖ್ಯರಸ್ತೆಯಲ್ಲಿ ಬೈಕೊಂದು ಕಾರಿಗೆ ಡಿಕ್ಕಿಯಾಗಿದ್ದು ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಒಡೆಯನಪುರ ಗ್ರಾಮದ ಜುನೈದ್ (೨೫) ಬೈಕ್ ಅವಘಡದಲ್ಲಿ ಸಾವನ್ನಪ್ಪಿದ ಹಿಂಬದಿ ಸವಾರ. ಬೈಕ್ ಸವಾರ ಹರ್ಷದ್ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರೆದಾಳು ಗ್ರಾಮದ ಮುಖ್ಯರಸ್ತೆಯಲ್ಲಿ ಬೈಕ್ ಕಾರಿಗೆ ಡಿಕ್ಕಿಯಾಗಿ ಮೋರಿಗೆ ಅಪ್ಪಳಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದವರು ಗಂಭೀರ ಗಾಯಗೊಂಡು ಜುನೈದ್ ಸಾವನ್ನಪ್ಪಿದ್ದಾನೆ. ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗಾಯಾಳು ಹರ್ಷದ್ ಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರಪೇಟೆ ವೃತ್ತ ನಿರೀಕ್ಷಕ ಮುದ್ದು ಮಹದೇವ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆ ಪಿಎಸ್‌ಐ ಎಚ್.ವೈ. ಚಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಿನ ಚಾಲಕ ರಫೀಕ್ ದೂರು ನೀಡಿದ್ದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.