ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಕಾಫಿಗೆ ಬೆಲೆ ಹೆಚ್ಚಳವಾಗುತ್ತಿರುವುದು ಕಾಫಿ ಬೆಳೆದವರ ಸಂತೋಷಕ್ಕೆ ಕಾರಣವಾಗುತ್ತಿದೆ. ಕಳೆದ ವರ್ಷದವರೆಗೂ ಒಂದಲ್ಲ ಒಂದು ಕಾರಣದಿಂದಾಗಿ ನಿರೀಕ್ಷಿತ ದರ ದೊರಕದೆ ಬೇಸರದಲ್ಲಿದ್ದ ಬೆಳೆಗಾರರ ಮನಸ್ಸೂ ಈಗ ಕಾಫಿ ಹೂವಿನಂತೆ ಸಂಭ್ರಮದಿAದ ಅರಳಿದೆ.

ಹೀಗಿದ್ದರೂ, ಈ ಸಂಭ್ರಮ ಸಡಗರ ಇನ್ನೂ ೧-೨ ವರ್ಷಗಳ ಕಾಲ ಹೀಗೆಯೇ ದರ ಏರಿಕೆಯ ಹಿನ್ನಲೆಯಲ್ಲಿ ಇರಬಹುದು ಎಂದುಕೊAಡರೂ ಕೆಲವೇ ಕೆಲವು ವರ್ಷಗಳಲ್ಲಿ ಬೆಳೆಗಾರರು ಕಠಿಣ ದಿನಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡುತ್ತಾರೆ ಹವಾಮಾನ ತಜ್ಞರು.

ಮೊದಲಿನ ಕಾಲಘಟ್ಟದಲ್ಲಿ ಕಾಫಿ ಬೆಳೆಯಬೇಕೆಂದರೆ ಕಾಫಿ ಕೃಷಿಗೆ ಮುಂದಾಗುವ ಬೆಳೆಗಾರರು ಕಾಫಿ ಬೆಳೆಯಲು ಸೂಕ್ತ ಜಾಗ, ಕಾಫಿಗೆ ತಕ್ಕುದಾದ ಹವಾಮಾನ ಮಳೆಯ ಪ್ರಮಾಣ, ತಂಪಾದ ವಾತಾವರಣ ಇತ್ಯಾದಿಗಳನ್ನೆಲ್ಲಾ ಕೂಲಂಕಶವಾಗಿ ಗಮನಿಸುತ್ತಿದ್ದರು.

ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಕಾಫಿ ಕೃಷಿಕರು, ನಿಸರ್ಗದ ಕಾಲಕ್ಕೆ ತಕ್ಕಂತೆ ತಾವು ಬೆಳೆ ಬೆಳೆಸುತ್ತಿದ್ದರು. ಮಳೆಗಾಲದಲ್ಲಿ ಇಂತಹ ಬೆಳೆ, ಬೇಸಿಗೆಯಲ್ಲಿ ಬೇರೆ ಬೆಳೆ ಹೀಗೆ ಜಗತ್ತಿನಾದ್ಯಂತವೂ ಆಯಾ ದೇಶದ ಹವಾಮಾನಕ್ಕೆ ತಕ್ಕಂತೆ ಬೆಳೆಯನ್ನು ಬೆಳೆಸಲಾಗುತ್ತಿತ್ತು. ಕಾರ್ಮಿಕರು ಕೂಡ ಆಯಾಯ ಪ್ರದೇಶದಲ್ಲಿ ಆಯಾಯಾ ಪರಿಸ್ಥಿತಿಗೆ ತಕ್ಕಂತೆ ಕೆಲಸಕ್ಕೆ ಸಿದ್ದರಾಗುತ್ತಿದ್ದರು.

ಆದರೆ, ಈ ಎಲ್ಲಾ ಕಾಲಮಾನಕ್ಕೆ ತಡೆಯೊಡ್ಡುವ ರೀತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯAತ ಕಂಡು ಬಂದಿರುವ ಹವಾಮಾನ ವೈಪರೀತ್ಯ ಎಂಬ ಬದಲಾದ ಕಾಲಘಟ್ಟದಿಂದಾಗಿ ಎಲ್ಲೆಲ್ಲೂ ನಿರೀಕ್ಷಿತ ರೀತಿಯಲ್ಲಿ ಕೃಷಿ ಮಾಡಲು ಅಸಾಧ್ಯವಾಗುತ್ತಿದೆ.

ತಂಪಿರಬೇಕಾದ ಸಮಯದಲ್ಲಿ ಬಿಸಿ.. ಬಿಸಿ ದಿನಗಳಲ್ಲಿ ತಂಪು - ಪ್ರಕೃತಿಯ ಆಟಾಟೋಪ!

ಏನಿದು ಹವಾಮಾನ ವೈಪರಿತ್ಯ ಎಂದರೆ, ತಂಪಿರಬೇಕಾದ ಪ್ರದೇಶದಲ್ಲಿ ಬಿಸಿ ವಾತಾವರಣ, ಬಿಸಿ ಇರಬೇಕಾದ ಪ್ರದೇಶದಲ್ಲಿ ತಂಪು ಹವೆ. ಮಳೆಗಾಲದಲ್ಲಿ ಬಿಸಿಲು, ಬೇಸಿಗೆಯಲ್ಲಿ ಮಳೆ, ಮಂಜು ಹೀಗೆ.. ಹವಾಮಾನ ನಿಯಂತ್ರಣಕ್ಕೆ ಸಿಗದಂತೆ ಬದಲಾಗುತ್ತಿರುವುದು ಇತರ ಎಲ್ಲಾ ಬೆಳೆಗಳಂತೆ ಕಾಫಿ ಫಸಲಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ಮಧ್ಯೆ ಸಿಲುಕಿ ಕಾಫಿ ಕೃಷಿಕನೂ ಬಳಲುವಂತಾಗಿದೆ

ಸೂರ್ಯನ ತೀಕ್ಷ÷್ಣ ಕಿರಣಗಳು ಕಳೆದ ಕೆಲವು ವರ್ಷಗಳಿಂದ ಊಹೆಗೂ ಮೀರಿದ ರೀತಿಯಲ್ಲಿ ಕಂಡುಬರುತ್ತಿದೆ. ಅಬ್ಬಾ.. ಇವತ್ತು ಸೂರ್ಯ ಕಿರಣ ತುಂಬಾ ತೀಕ್ಷ÷್ಣವಾಗಿದೆ. ತಾಪ ವಿಚಿತ್ರವಾಗಿದೆ ಎಂದು ಅನೇಕ ಬಾರಿ ಮಾತನಾಡಿಕೊಳ್ಳುವುದಿಲ್ಲವೇ.. ಇಂತಹ ಸೂರ್ಯಕಿರಣಗಳ ತೀಕ್ಷತೆಯೂ ಕೂಡ ಕಾಫಿ ಸಸಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗೇ ನಿರೀಕ್ಷೆಗೂ ಮೀರಿ ಸುರಿಯುವ ಭಾರೀ ಮಳೆಯು ಕೂಡ ಕಾಫಿ ಸಸಿಗಳ ಪಾಲಿಗೆ ಮಾರಣಾಂತಿಕವಾಗಿದೆ.

ಭಾರತದ ಕಾಫಿ ಫಸಲಿನ ಪಾಲಿಗೆ ಮಾರ್ಚ್, ಏಪ್ರಿಲ್‌ನಲ್ಲಿ ಬೀಳುವ ಹೂ ಮಳೆ ಅತ್ಯಂತ ನಿರ್ಣಾಯಕ ಮತ್ತು ಮಹತ್ವದ್ದು, ಈ ತಿಂಗಳಿನಲ್ಲಿ ಎಷ್ಟು ಬೇಕೋ ಅಷ್ಟು ಮಳೆ ಬಿದ್ದರೆ ಮಾತ್ರ ವರ್ಷಾಂತ್ಯದಲ್ಲಿ ಉತ್ತಮ ಕಾಫಿ ಫಸಲು ಬೆಳೆಗಾರನಿಗೆ ದೊರಕಲು ಸಾಧ್ಯ. ಆದರೆ, ಕೆಲವು ವರ್ಷಗಳಿಂದ ಹೂ ಮಳೆಯಲ್ಲಿಯೂ ಅಸಮತೋಲನ ಕಂಡುಬAದಿದೆ. ಇದು ಕೂಡ ಬೆಳೆಗಾರನ ಪಾಲಿಗೆ ಕಾಫಿ ಫಸಲು ಹೆಚ್ಚದೇ ಇರಲು ಕಾರಣವಾಗಿದೆ.

ಬ್ರೆಜಿಲ್, ವಿಯೆಟ್ನಾಂನAತಹ ಜಗತ್ತಿನ ಪ್ರಮುಖ ಕಾಫಿ ಬೆಳೆಗಾರ ದೇಶಗಳಲ್ಲಿಯೂ ಹವಾಮಾನ ವೈಪರೀತ್ಯ ಎಂಬುದು ಬೆಳೆಗಾರರ ಪಾಲಿಗೆ ತೂಗುಕತ್ತಿಯಂತಾಗಿದೆ. ಒಂದೆಡೆ ವಾರವಾರಕ್ಕೂ ಹೆಚ್ಚಾಗುತ್ತಿರುವ ತಾಪಮಾನ, ಮತ್ತೊಂದೆಡೆ ದೇಶದಲ್ಲಿ ಅನಾವೃಷ್ಟಿಯ ಪರಿಸ್ಥಿತಿ. ವಿಚಿತ್ರ ಎಂಬAತೆ ಇನ್ನೊಂದೆಡೆ ಅತಿಯಾದ ಮಳೆ, ಪ್ರವಾಹ ಸ್ಥಿತಿ. ಆ ದೇಶಗಳಲ್ಲಿ ಕಾಫಿ ಉದ್ಯಮ ಈ ರೀತಿಯ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಬಳಲರಾರಂಭಿಸಿದೆ.

ಭಾರತದ ಕಾಫಿ ಪಾಲಿಗೆ ನೆರಳೇ ಶ್ರೀರಕ್ಷೆ!

ಆ ದೇಶಗಳಿಗೆ ಹೋಲಿಸಿದರೆ ಭಾರತ ಬಹಳ ಮಟ್ಟಿಗೆ ಸುರಕ್ಷಿತವಾಗಿದೆ ಎನ್ನುತ್ತಾರೆ ಕೊಡಗಿನ ಹಿರಿಯ ಕಾಫಿ ಬೆಳೆಗಾರ, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ. ಏಕೆಂದರೆ, ಭಾರತದಲ್ಲಿ ಬೆಳೆಗಾರರು ಇಂದಿಗೂ ನೆರಳಿನಡಿ ಕಾಫಿ ಸಸಿಗಳನ್ನು ಬೆಳೆಸುತ್ತಿದ್ದಾರೆ. ಈ ನೆರಳು ಆಶ್ರಿತ ಕೃಷಿಯೇ ನಮ್ಮನ್ನು ಬಹುಮಟ್ಟಿಗೆ ಬಚಾವ್ ಮಾಡಿದೆ. ಹವಾಮಾನ ವೈಪರೀತ್ಯ ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಭಾರೀ ಆಘಾತ ಸೃಷ್ಟಿಸದೇ ಇರಲು ನಮ್ಮ ಪ್ರಕೃತ್ತಿ ಆಧಾರಿತ ಕಾಫಿ ಕೃಷಿಯೇ ಮುಖ್ಯ ಕಾರಣವಾಗಿದೆ ಎಂದು ಬೋಸ್ ಮಂದಣ್ಣ ಅಭಿಪ್ರಾಯಪಡುತ್ತಾರೆ. ಎಷ್ಟೇ ತೀಕ್ಷ÷್ಣವಾದ ಕಿರಣಗಳಿರಲಿ, ತೋಟದಲ್ಲಿ ಕಾಫಿಯ ನಡುವೇ ಬೆಳೆಸಲಾದ ಗಿಡ, ಮರಗಳು ಕಾಫಿ ಗಿಡಗಳ ಬುಡಗಳಿಗೆ ಈ ಕಿರಣಗಳು ಸೋಂಕದAತೆ ರಕ್ಷಿಸುತ್ತಿವೆ. ಹೀಗಾಗಿಯೇ ವಿದೇಶಗಳಂತೆ ಭಾರತದಲ್ಲಿ ಕಾಫಿ ಗಿಡಗಳು ಬಿಸಿಲಿನ ಬೇಗೆಯಿಂದ ಸುಟ್ಟು ಹೋಗುತ್ತಿಲ್ಲ ಎಂದು ಹೇಳಿದರು ಬೋಸ್ ಮಂದಣ್ಣ.

ವಿಯೆಟ್ನಾA ದೇಶದಲ್ಲಿ ಬಟಾಬಯಲು ಪ್ರದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಹೀಗಾಗಿಯೇ ಕಳೆದ ವರ್ಷದಿಂದ ವಿಯೆಟ್ನಾಂ ಕೂಡ ಹವಾಮಾನ ವೈಪರೀತ್ಯದ ಅಪಾಯಕ್ಕೆ ಸಿಲುಕಿ ಕಾಫಿ ಗಿಡಗಳು ಸುಟ್ಟು ಹೋಗಿ ಫಸಲಿನ ಮೇಲೆ ಭಾರೀ ಪರಿಣಾಮ ಬೀರುವಂತೆ ಮಾಡಿದೆ.

ಮಳೆ... ಬಿಸಿಲು... ಮಂಜು... ಛಳಿ... ಏಕಕಾಲಕ್ಕೆ!!

ಜಾಗತಿಕವಾಗಿ ವಿಶ್ಲೇಷಿಸುವುದಾದಲ್ಲಿ ಬ್ರೆಜಿಲ್, ವಿಯೆಟ್ನಾಂನAತಹ ದೇಶಗಳು ಕಳೆದ ವರ್ಷ ಅತಿವೃಷ್ಟಿ, ಜತೆಗೇ ಅನಾವೃಷ್ಟಿ ಮತ್ತು ಮಂಜುಗಡ್ಡೆ, ಛಳಿಯಂತಹ ವಿವಿಧ ವಿಕೋಪಗಳನ್ನು ಏಕಕಾಲದಲ್ಲಿ ನೋಡಿಬಿಟ್ಟಿದೆ. ಈಗ ವಿಶ್ವವ್ಯಾಪೀ ಕಾಡುತ್ತಿರುವ ಹವಾಮಾನ ವೈಪರೀತ್ಯಕ್ಕೆ ಸೂಕ್ತ ಕಾರಣಗಳೇ ಇಲ್ಲದಂತಾಗಿದೆ ಎಂದು ವಿಶ್ಲೇಷಣೆ ಮಾಡುವ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮಡಿಕೇರಿಯ ಕೆ.ಕೆ. ವಿಶ್ವನಾಥ್, ಕೆಲವು ವರ್ಷಗಳಿಂದ ಮುಂಗಾರು ಪ್ರವೇಶ ಜೂನ್ ಅಂತ್ಯಕ್ಕೆ ಅಂದರೆ ನಿಗದಿಗಿಂತ ೨೦-೨೫ ದಿನ ತಡವಾಗಿ ಆಗುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಸಂಪೂರ್ಣ ಅಂತ್ಯವಾಗಬೇಕಾಗಿದ್ದ ಮಳೆಯ ದಿನಗಳು ಮತ್ತಷ್ಟು ವಿಸ್ತರಣೆಯಾಗಿದೆ. ಅರ್ಥಾತ್, ಮಳೆಯ ದಿನಗಳು ಹೆಚ್ಚಾಗುತ್ತಿವೆ. ಕಾಫಿ ಬೆಳೆಗಾರ ಇದಕ್ಕಾಗಿ ಸಂತೋಷ ಪಡಬೇಕೋ, ದುಖಿಸಬೇಕೋ ಎಂದು ತಿಳಿಯದಾಗಿದೆ ಎಂದರು. ನವೆಂಬರ್ - ಡಿಸೆಂಬರ್‌ನಲ್ಲಿಯೂ ಮಳೆಗಾಲದಂತೆ ಮಳೆ ಸುರಿದು ಛಳಿಗಾಲದ ಪ್ರವೇಶ ಮುಂದೂಡಲ್ಪಟ್ಟಿದೆ. ಇದರಿಂದಾಗಿ ಕಾಫಿಗೆ ಭಾರೀ ಹಾನಿಯಾಗುತ್ತಿದೆ ಕಾಫಿ ಫಸಲಿನ ಗುಣಮಟ್ಟಕ್ಕೆ ಅತ್ಯಂತ ಅಗತ್ಯವಾಗಿರುವ ಛಳಿಯೇ ಸೂಕ್ತ ಕಾಲದಲ್ಲಿ ದೊರಕದಿದ್ದರೆ ಗುಣಮಟ್ಟ ಕಾಯ್ದುಕೊಳ್ಳಲು ಹೇಗೆ ಸಾಧ್ಯ? ಛಳಿಯಿಲ್ಲದೆ, ತಂಪಿನ ಹವೆಯಿಲ್ಲದೆ ಕಾಫಿ ಮೊಗ್ಗು ಸಮರ್ಪಕವಾಗಿ ಅರಳಲೂ ತೊಡಕಾಗಿದೆ ಎಂದು ವಿಶ್ವನಾಥ್ ವಿಷಾದದಿಂದ ನುಡಿದರು.

ಮಳೆಗಾಲ ವಿಸ್ತರಿಸುವುದರಿಂದಾಗಿ ಮಳೆ ಮತ್ತು ಕಾಫಿ ಕೊಯ್ಲು ಏಕಕಾಲದಲ್ಲಿ ಕಂಡುಬAದು ಫಸಲಿನ ಗುಣಮಟ್ಟಕ್ಕೆ ತೀವ್ರ ಧಕ್ಕೆಯಾಗಿದೆ. ಊಹೆಗೂ ಮೀರಿದಂತೆ ಪ್ರಕೃತಿಯಲ್ಲಿ ಬದಲಾವಣೆ ಉಂಟಾಗುತ್ತಿದೆ. ಜಾಗತಿಕವಾಗಿ ಈ ಸಮಸ್ಯೆ ಸವಾಲಿನ ರೂಪದಲ್ಲಿ ಕಂಡಿರುವುದರಿAದಾಗಿ ಇದನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಚರ್ಚೆಗಳು, ಸಂಶೋಧನೆಗಳು ನಡೆಯುತ್ತಲೇ ಇದೆ. ದೊಡ್ಡ ಬೆಳೆಗಾರರು ಎಲೆಕ್ಟಿçಕಲ್ ಡ್ರೆöÊಯರ್, ಪಾಲಿಹೌಸ್ ನಂತಹ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ. ಮಧ್ಯಮ, ಸಣ್ಣ ಕೃಷಿಕರಿಗೆ ಇವೆಲ್ಲಾ ಕಷ್ಟಸಾಧ್ಯವಾದೀತು ಎಂದು ವಿಶ್ವನಾಥ್ ಹೇಳಿದರು.

ಪ್ರಕೃತ್ತಿಯ ಬದಲಾವಣೆಯ ಆಟಾಟೋಪದ ಮುಂದೆ ಎಲ್ಲರೂ ತಲೆಬಾಗಲೇ ಬೇಕು ಎಂಬುದೇ ಅಂತಿಮ ಸತ್ಯ ಎನ್ನುತ್ತಾರೆ ವಿಶ್ವನಾಥ್. ಕಳೆದ ವರ್ಷದ ಪರಿಸ್ಥಿತಿಯನ್ನೇ ಅವಲೋಕಿಸುವುದಾದಲ್ಲಿ, ಅಕಾಲಿಕ ಮಳೆಯಿಂದಾಗಿ ಕರ್ನಾಟಕದ ಕಾಫಿ ಜಿಲ್ಲೆಗಳಲ್ಲಿ ಶೇ. ೧೫ ರಷ್ಟು ಬೆಳೆ ನಷ್ಟವಾಗಿತ್ತು. ಅಕಾಲಿಕ ಮಳೆಯಿಂದಾಗಿ ಗಿಡಗಳಲ್ಲಿ ಅನಿಯಮಿತವಾಗಿಯೇ ಕಾಫಿ ಹಣ್ಣಾಗುವಿಕೆಯೂ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ಆಗಿಂದಾಗ್ಗೆ ಕಾಡಿದ ಚಂಡಮಾರುತಗಳೂ ಕೂಡ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ ಫಸಲಿನ ಹಾನಿಗೆ ಕಾರಣವಾದವು. ಕಾಫಿ ಜತೆಗೇ ಪರ್ಯಾಯ ಬೆಳೆಯಾಗಿ ಕೃಷಿಕರು ಆಶ್ರಯಿಸಿದ್ದ ಭತ್ತದ ಮೇಲೂ ಈ ಚಂಡಮಾರುತ ಭಾರೀ ಪರಿಣಾಮ ಬೀರಿತ್ತು. ಮೋಡ ಮುಸುಕಿದ ವಾತಾವರಣ ಕಳೆದ ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. ಗಿಡದಲ್ಲಿಯೇ ಕಾಫಿ ಕೊಳೆಯುವ ಪ್ರಕರಣ ಕೂಡ ಹೆಚ್ಚಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಕಾಫಿಗೆ ಕಾಂಡಕೊರಕ ಹುಳುಗಳ ಭಾಧೆ, ಹೆಚ್ಚಾಗಿ ಕಾಫಿಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ. ವರ್ಷಪೂರ್ತಿ ತೋಟಗಳಲ್ಲಿ ಬೆವರು ಸುರಿಸಿ ದುಡಿದು ಹೈರಾಣಾಗಿರುವ ಬೆಳೆಗಾರನ ಪಾಲಿಗೆ ಗಿಡದಲ್ಲಿ ಫಸಲು ಉತ್ತಮವಾಗಿ ಬಂದು, ಇನ್ನೇನು ಮಾರಾಟ ಮಾಡಿ ಆರ್ಥಿಕವಾಗಿ ಚೈತನ್ಯ ಪಡೆದುಕೊಳ್ಳಬೇಕು ಎಂಬಷ್ಟರಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆ, ಗಾಳಿ, ಮೋಡದಂತಹ ವಾತಾವರಣ ಒಟ್ಟು ಸಂಭ್ರಮವನ್ನೇ ನೀರು ಪಾಲು ಮಾಡುತ್ತಿದೆ.

ಕಾಫಿ ಬೆಳೆಗಾರರಿಗೆ ಭವಿಷ್ಯದಲ್ಲಿ ಖಂಡಿತಾ ಹವಾಮಾನ ವೈಪರೀತ್ಯದ ಬಿಸಿ ತಟ್ಟಲಿದೆ. ಕಳೆದ ವರ್ಷದಿಂದ ಬೇಸಿಗೆಯಲ್ಲಿಯೂ ಮಳೆ ಬಂದಿರುವ ವಿಚಿತ್ರವನ್ನು ಗಮನಿಸಿದ್ದೇವೆ. ಅಕಾಲಿಕ ಮಳೆ ಎಂಬುದು ಭಾರತ ಮಾತ್ರವಲ್ಲ, ಎಲ್ಲಾ ದೇಶಗಳ ಪಾಲಿಗೆ ಸಾಮಾನ್ಯವಾದ ಅಪಾಯ ಆಗಲಿದೆ. ಯಾವಾಗ ಬೇಕಾದರೂ ಹವಾಮಾನದಲ್ಲಿ ಬದಲಾವಣೆ ಉಂಟಾಗಿ ಭಾರೀ ಮಳೆ ಬರುವ ಎಲ್ಲಾ ಸಾಧ್ಯತೆಗಳಿದೆ. ಮಳೆಗಾಲದಲ್ಲಿಯೇ ಮಳೆ ಬರಬೇಕು ಎಂದೇನಿಲ್ಲ. ಮಳೆಗಾಲದಲ್ಲಿ ಬಿಸಿಲಿನ ಝಳ ಹೆಚ್ಚಾಗಬಹುದು. ಮಳೆ ಬರಬೇಕಾದ ತಿಂಗಳಿನಲ್ಲಿ ಮಳೆಯೇ ಬಾರದೇ ಅದು ಆಯಾ ತಿಂಗಳನ್ನು ಮುಂದೂಡಿ ನಂತರದ ತಿಂಗಳಿನಲ್ಲಿ ಬರಬಹುದು.

ಎಲ್ಲವೂ ಅಕಾಲಿಕವಾಗಿ ಸಂಭವಿಸುವ ಭವಿಷ್ಯದ ಸಾಧ್ಯತೆಯಲ್ಲಿ ಕಾಫಿ ಬೆಳೆಗಾರ ಕೂಡ ಇಂತಹ ಸವಾಲು ಎದುರಿಸಲು ಸಜ್ಜಾಗಬೇಕಾಗಿದೆ ಎಂದು ಎಚ್ಚರಿಸುತ್ತಾರೆ ಎನ್. ಬೋಸ್ ಮಂದಣ್ಣ. ಮಳೆ ಕೊಯ್ಲು ಪದ್ಧತಿ, ತೋಟಗಳಲ್ಲಿ ಹೆಚ್ಚಿನ ತಂಪು ವಾತಾವರಣ ಇರುವಂತೆ ನೋಡಿಕೊಳ್ಳುವುದು, ಲಾಭದ ಆಸೆಗಾಗಿ ತೋಟಗಳಲ್ಲಿ ಭಾರೀ ಪ್ರಮಾಣದ ಮರಗಿಡ ಕಡಿಯುವುದರ ಬದಲಿಗೆ, ಭವಿಷ್ಯದ ಹಿತಚಿಂತನೆಯಿAದ ಮತ್ತು ಕಾಫಿ ಕೃಷಿ ಉದ್ಯಮದ ಶ್ರೇಯಸ್ಸಿನ ದೃಷ್ಟಿಯಿಂದ ಸರ್ವ ಕಾಫಿ ಕೃಷಿಕರೂ ನೆರಳಾಶ್ರಿತ ಕಾಫಿಗೆ ಆದ್ಯತೆ ನೀಡಿದರೆ ಸ್ವಲ್ಪ ಮಟ್ಟಿಗಾದರೂ ಹವಾಮಾನ ವೈಪರೀತ್ಯ ಎಂಬ ಸುನಾಮಿಯಿಂದ ಪಾರಾಗಲು ಸಾಧ್ಯವಿದೆ ಎಂಬ ಸಲಹೆ ಬೋಸ್ ಮಂದಣ್ಣ ಅವರದ್ದು. ವಿದೇಶಗಳಲ್ಲಿ ಬೇರೆ ಕೃಷಿ ಫಸಲಿಗೆ ಇರುವಂತೆ ಹಸಿರು ಮನೆಯ ವ್ಯವಸ್ಥೆ ಕಾಫಿ ಕೃಷಿಗೂ ಬಂದರೂ ಅಚ್ಚರಿಯಿಲ್ಲ.

ಇಡೀ ಜಗತ್ತಿಗೆ ಬಿಸಿ ಮುಟ್ಟಿಸಿರುವ ಹವಾಮಾನ ಬದಲಾವಣೆ ಕಾಫಿ ಕೃಷಿಗೂ ಕಂಟಕವಾಗಲಿದೆ. ಅಕಾಲಿಕ ಮಳೆ, ಭೂಕುಸಿತ, ಮಣ್ಣಿನ ಮೇಲೆ ಉಂಟಾಗುವ ಪರಿಣಾಮ, ಕಾಫಿ ಬೆಳೆಯುವ ಮಣ್ಣು ಗುಣಮಟ್ಟ ಕಳೆದುಕೊಳ್ಳುವ ಮೂಲಕ ಕಾಫಿಯ ಗುಣಮಟ್ಟದ ಮೇಲೂ ಪರಿಣಾಮ ಬೀರುವುದು.. ಹೀಗೆ ಸರಣಿ ಸಮಸ್ಯೆಗಳು ಭವಿಷ್ಯದಲ್ಲಿ ಕಾಫಿ ತೋಟ ನಿರ್ವಹಣೆಗೆ ಸಂಕಷ್ಟ ತಂದೊಡ್ಡಲಿದೆ. ಸುಸ್ಥಿರ ಕೃಷಿಗೆ ಇಂತಹ ನೈಸರ್ಗಿಕ ಬದಲಾವಣೆಗಳು ಅಪಾಯಕಾರಿಯಾಗಿದೆ. ವಿಶ್ವಮಟ್ಟದಲ್ಲಿಯೇ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಪರಿಹಾರೋಪಾಯಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ. ರಾಜೀವ್ ಹೇಳಿದರು.

ಹವಾಮಾನ ನಂಬಿಕೊAಡು ಯಾವುದೇ ಕೃಷಿ ಫಸಲನ್ನು ಬೆಳೆಯಲು ನೂರು ಬಾರಿ ಯೋಚಿಸಬೇಕಾದ ಪರಿಸ್ಥಿತಿ ಈಗಿದೆ. ಆಕಾಶದಲ್ಲಿ ಕವಿದ ಕಾರ್ಮೋಡ ಬೆಳೆಗಾರನ ಮನಸ್ಸಿನಲ್ಲಿಯೂ ಮೂಡುವ ಕರಾಳತೆಯ ಸಂಕೇತದAತಿದೆ.

- ಅನಿಲ್ ಎಚ್.ಟಿ., ಮಡಿಕೇರಿ.