ಸುಂಟಿಕೊಪ್ಪ, ಫೆ. ೧೦: ಗ್ರಾಮೀಣ ಮುಖ್ಯ ರಸ್ತೆಗಳು ಸೇರಿದಂತೆ ಎಲ್ಲಾ ರೀತಿಯ ಸಂಪರ್ಕ ರಸ್ತೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸ ಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದ ಕೆದಕಲ್ ಹೊರೂರು ಚೆಟ್ಟಳ್ಳಿ ಸಂಪರ್ಕ ರಸ್ತೆಯನ್ನು ರೂ. ೪೫ ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊAಡ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆದಕಲ್ ಗ್ರಾಮ ಪಂಚಾಯಿತಿಯು ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು ಜನ ಸಂಖ್ಯೆ ಕಡಿಮೆ ಇದೆ. ಈಗಾಗಲೇ ಹಲವು ಇಲಾಖಾ ಅನುದಾನಗಳ ಅಡಿಯಲ್ಲಿ ಒಟ್ಟು ರೂ. ತೊಂಬತ್ತು ಲಕ್ಷದಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕೆಲವು ಕಾಮಗಾರಿಗಳು ಮುಗಿದಿದ್ದು, ಕೆಲವು ಕಾಮಗಾರಿಗಳನ್ನು ಮುಂದುವರಿದ ಕಾಮಗಾರಿಯೆಂದು ಪರಿಗಣಿಸಬೇಕಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭ ತೋಟದ ಮಾಲೀಕರು ರಸ್ತೆಯ ೨ ಬದಿಯ ಮರಗಳನ್ನು ತೋಟದ ಬೇಲಿಗಳನ್ನು ತೆರವುಗೊಳಿಸಿಕೊಡುವುದರೊಂದಿಗೆ ಅಭಿವೃದ್ಧಿಗೆ ತಮ್ಮ ಸಹಕಾರ ನೀಡುವುದರಿಂದ ಕಾಮಗಾರಿಗಳು ಹೆಚ್ಚು ಕಾಲ ಉಪಯೋಗಕ್ಕೆ ಬರುತ್ತದೆ ಎಂದರು. ಕೆದಕಲ್ ಗ್ರಾಮ ಪಂಚಾಯಿತಿಯ ಕೆಲವು ಹಳ್ಳಿಗಳಲ್ಲಿ ಆನೆ ಮಾನವ ಸಂಘರ್ಷ ಹೆಚ್ಚಿದ್ದು, ಈಗಾಗಲೇ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನದೊಂದಿಗೆ ಅಭಿವೃದ್ಧಿ ಪರ ಯೋಜನೆಗಳನ್ನು ಹಮ್ಮಿಕೊಳ್ಳ ಲಾಗುವು ದೆಂದು ಶಾಸಕರು ನುಡಿದರು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕೆದಕಲ್ ಗ್ರಾ.ಪಂ. ಅಧ್ಯಕ್ಷೆ ಎಂ.ಕೆ. ಪುಷ್ಪ, ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ಹೆಚ್.ಕೆ. ಆನಂದ, ನಿಕಟಪೂರ್ವ ಉಪಾಧ್ಯಕ್ಷ ಮುಕ್ಕಾಟಿರ ಸಂಜು ಪೊನ್ನಪ್ಪ, ಸದಸ್ಯರುಗಳಾದ ಬಿದ್ದಪ್ಪ, ಶಿವಶಂಕರ್, ಜಿ.ಪಂ. ಅಭಿಯಂತರ ಫಯಾಜ್ ಅಹ್ಮದ್ ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫಿಕ್‌ಖಾನ್, ಕಂಬಿಬಾಣೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮಧುನಾಗಪ್ಪ, ಮಾಜಿ ಸದಸ್ಯರುಗಳಾದ ಕಾಯರ್‌ಮಾರ್ ದೇವಿಪ್ರಸಾದ್, ವೆಂಕಪ್ಪ ಕೋಟ್ಯಾನ್, ಚೆಪ್ಪುಡಿರ ಸತೀಶ್, ಗ್ರಾಮಸ್ಥರಾದ ಕೊರವಂಡ ಸಂತೋಷ್ ಪೂವಯ್ಯ, ಸಿ. ಸೋಮಣ್ಣ, ಸೇರಿದಂತೆ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.