ಗೋಣಿಕೊಪ್ಪಲು, ಫೆ. ೧೦: ಕಾಫಿ ಕುಯ್ಲು ಮುಗಿಯುತ್ತಿದ್ದಂತೆಯೆ ತೋಟಗಳಿಗೆ ಸ್ಪಿಂಕ್ಲರ್ ಮೂಲಕ ಪೈಪ್ ಲೈನ್ ಜೋಡಿಸಿ ನೀರಾಯಿಸುವುದು ವಾಡಿಕೆ. ಆದರೆ ಕುಂದ, ಈಚೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಕಾಫಿ ತೋಟದಲ್ಲಿ ರೈತರು ನೀರು ಹಾಯಿಸಲು ಪೈಪ್‌ಲೈನ್ ಅಳವಡಿ ಸಲು ಕಾಡಾನೆಗಳು ಅಡ್ಡಿಪಡಿಸುತ್ತಿವೆ.
ಹಾಕಿದ ಪೈಪ್‌ಲೈನ್‌ಗಳನ್ನು ಕಾಡಾನೆಗಳು ಧ್ವಂಸಗೊಳಿಸುತ್ತಿವೆ. ಅಲ್ಲದೆ ತೋಟದಲ್ಲಿರುವ ಫಸಲು ಭರಿತ ಗಿಡಗಳನ್ನು ಹಾಳು ಮಾಡುತ್ತಿವೆ. ಕಾಡಾನೆಗಳು ತೋಟದಲ್ಲಿ ನೆಲೆ ನಿಂತಿರುವುದರಿAದ ಈ ಭಾಗದ ಬಹು ತೇಕ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.
ತೋಟದಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಓಡಿಸುವ ಪ್ರಯತ್ನ ಮಾಡಿದರಾದÀರೂ, ಒಂದು ತೋಟ ದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳು ತೆರಳುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.
ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ನೆಲೆ ನಿಂತಿರುವುದರಿAದ ಗ್ರಾಮಸ್ಥರು ಮುಂಜಾನೆ ೮ ಗಂಟೆಯ ನಂತರವಷ್ಟೇ ಮನೆಯಿಂದ ಹೊರ ಬರಬೇಕಾದ ಹಾಗೂ ಸಂಜೆ ೫ ಗಂಟೆಯ ವೇಳೆ ಮನೆ ಸೇರಿಕೊಳ್ಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಇದೀಗ ತೋಟದಲ್ಲಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರು ಕುಂದ ಬಳಿಯಲ್ಲಿ ತುರ್ತು ಸಭೆ ನಡೆಸಿ ಕಾಡಾನೆಗಳ ಹಾವಳಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಸಭೆಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರನ್ನು ಬರಮಾಡಿಕೊಂಡ ಗ್ರಾಮಸ್ಥರು ಈಚೂರು ಹಾಗೂ ಕುಂದ ಭಾಗದಲ್ಲಿ ನಿರಂತರವಾಗಿ ಕಾಡಾನೆಯ ಹಿಂಡು ತೋಟದಲ್ಲಿ ನೆಲೆ ನಿಂತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲು ಆಗ್ರಹಿಸಿದರು.
ಗ್ರಾಮಸ್ಥರ ಮನವಿ ಮೇರೆಗೆ ಕುಂದ ಗ್ರಾಮಕ್ಕೆ ತೆರಳಿದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ, ಗ್ರಾಮಸ್ಥರ ಮನವಿಯನ್ನು ಆಲಿಸಿದರು. ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡಾನೆಗಳು ನೀಡುತ್ತಿರುವ ನಿರಂತರ ಉಪಟಳದ ಬಗ್ಗೆ ಗ್ರಾಮಸ್ಥರು ವಸ್ತು ಸ್ಥಿತಿಯನ್ನು ಸಂಕೇತ್ ಪೂವಯ್ಯನವರ ಮುಂದಿಟ್ಟರು.
ಸಭೆಯಲ್ಲಿ ಹಲವರು ಕಾಡಾನೆಯ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪೊನ್ನಂಪೇಟೆ ತಾಲೂಕು ಬಂದ್ ಕರೆಗೆ ಎಚ್ಚರಿಕೆ ನೀಡಲು ಪ್ರಸ್ತಾಪಿಸಿದರು. ಹಲವರು ಪೊನ್ನಂಪೇಟೆ ಅರಣ್ಯ ಇಲಾಖೆಗೆ ಬೀಗ ಜಡಿಯುವ ಮೂಲಕ ಸರ್ಕಾರದ ಗಮನ ಸೆಳೆಯುವ ಬಗ್ಗೆಯೂ ಪ್ರಸ್ತಾಪಿಸಿದರು. ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ನಂತರ ಸಭೆಯಲ್ಲಿ ಮಾತನಾಡಿದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಈಗಾಗಲೇ ಕಾಡಾನೆಯ ಹಾವಳಿಯ ಬಗ್ಗೆ ಕ್ಷೇತ್ರದ ಶಾಸಕ ಪೊನ್ನಣ್ಣ ಮುಖ್ಯಮಂತ್ರಿಗಳ ಹಾಗೂ ಅರಣ್ಯ ಸಚಿವರ ಮುಂದೆ ಇಲ್ಲಿಯ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಸ್ತಾಪ ಸಲ್ಲಿಸಿದ್ದಾರೆ.
ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಮುಖ್ಯಮಂತ್ರಿಗಳ ಹಾಗೂ ಅರಣ್ಯ ಸಚಿವರ ಸಮ್ಮುಖದಲ್ಲಿ ನಾನೂ ಕೂಡ ಇಲ್ಲಿಯ ಪರಿಸ್ಥಿತಿಯನ್ನು ಸಭೆಯಲ್ಲಿ ಮಂಡಿಸಿದ್ದೇನೆ. ಈಗಾಗಲೇ ಈ ಭಾಗಕ್ಕೆ ೨೧ ಕೋಟಿ ಅನುದಾನ ವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಅಗತ್ಯವಿರುವ ಕಡೆ ಮುಂದಿನ ದಿನದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗು ವುದು. ಈ ಯೋಜನೆಗೆ ಒಂದಷ್ಟು ಸಮಯಾವಕಾಶವೂ ಬೇಕಾಗಲಿದೆ. ಸದ್ಯದ ಪರಿಸ್ಥಿಯಲ್ಲಿ ಗ್ರಾಮದಲ್ಲಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡಲು ಉನ್ನತ ಮಟ್ಟದಲ್ಲಿ ಸಭೆಗಳು ನಡೆಯಬೇಕಾಗಿವೆ ಎಂದರು.
ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಆದಷ್ಟು ಬೇಗನೇ ಶಾಸಕ ಪೊನ್ನಣ್ಣನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಮುಂದಿನ ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ನಡೆಸೋಣ. ಇದರಿಂದ ನಂತರವಷ್ಟೆ ಮುಂದಿನ ಹೆಜ್ಜೆ ಇಡೋಣ ಎಂದು ಸಭೆಯಲ್ಲಿದ್ದವರಿಗೆ ಮನವರಿಕೆ ಮಾಡಿದರು. ಅಂತಿಮವಾಗಿ ಆದಷ್ಟು ಬೇಗನೇ ಶಾಸಕ ಪೊನ್ನಣ್ಣನವರ ಅಧ್ಯಕ್ಷತೆಯಲ್ಲಿ ಗ್ರಾಮದ ರೈತರ ಹಾಗೂ ಬೆಳೆಗಾರರ ಸಭೆ ನಡೆಸಲು ತೀರ್ಮಾನವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿಗಳಾದ ಶಂಕರ್, ಡಿಆರ್‌ಎಫ್‌ಒ ದಿವಾಕರ್, ಗ್ರಾಮಸ್ಥರುಗಳಾದ ನಾಯಂದರ ಶಿವಾಜಿ, ತಿತಿಮಾಡ ಶರಣ್, ಮದ್ರಿರ ಪ್ರಿನ್ಸ್, ಪವನ್, ಗುಮ್ಮಟ್ಟಿರ ಚಿಣ್ಣಪ್ಪ, ಮನೆಯಪಂಡ ಬೆಳ್ಳಿಯಪ್ಪ, ತೀತಮಾಡ ಸುಬ್ಬಯ್ಯ, ಮದ್ರಿರ ಚಿಣ್ಣಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.