ನಾಪೋಕ್ಲು, ಫೆ. ೧೦ : ಸಂಯುಕ್ತ ಅರಬ್ ಸಂಸ್ಥಾನದ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಕೊಡಗಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕೊಡಗಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹೊದ್ದೂರು ಗ್ರಾಮ ಪಂಚಾಯಿತಿಯ ಹೊದವಾಡ ಗ್ರಾಮದ ರಾಫಲ್ಸ್ ಇಂಟರ್ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕುಂಡAಡ ಕುಂಜಿಲ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರ, ಪಾರಿತೋಷಕ ಮತ್ತು ನಗದು ನೀಡಿ ಗೌರವಿಸಿದರು, ಹಾಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಮತ್ತು ಸರ್ಟಿಫಿಕೇಟ್ ಹಸ್ತಾಂತರಿಸಲಾಯಿತು.
ಕಾರ್ಯಕ್ರಮಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿ ಗಳಿಗೆ ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಕುಂಜಿಲ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಾಯಿನಿ ಗಂಗಮ್ಮ, ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಾಯಿನಿ ಕಲಿಯಾಟಂಡ ಶಾರದಾ, ರಾಫಲ್ಸ್ ಕಾಲೇಜು ಪ್ರಾಂಶುಪಾಲ ತನ್ವೀರ್, ಬಲ್ಲಮಾವಟಿ ಶಾಲೆಯ ಅಧ್ಯಾಪಕ ಮೆಹಬೂಬ್ ಮಾಸ್ಟರ್, ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಕಾರ್ಯದರ್ಶಿ ಬಷೀರ್ ಎಡಪಾಲ, ಮರ್ಕಜ್ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಮತ್ತು ಆಕ್ಸ÷್ಫರ್ಡ್ ಶಾಲೆಯ ಮಾಲೀಕ ಶಾಹಿದ್ ಕೊಟ್ಟಮುಡಿ, ಶಿಕ್ಷಕ ವೃಂದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.