ಸಿದ್ದಾಪುರ, ಫೆ. ೧೧: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಹಾಗೂ ಕಾಡುಕೋಣಗಳ ಹಾವಳಿ ಹೆಚ್ಚಾಗಿ ಸಮಸ್ಯೆ ಸೃಷ್ಟಿಯಾಗಿದೆ. ಕರಡಿಗೋಡು ಗ್ರಾಮದ ಕೆ.ಪಿ. ಗಣಪತಿ ಹಾಗೂ ದೇವಯ್ಯ ಎಂಬವರ ಕಾಫಿ ತೋಟದೊಳಗೆ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೆ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಫಸಲಿರುವ ಅಡಿಕೆ ಮರಗಳನ್ನು ಎಳೆದು ಹಾಕಿ ಧ್ವಂಸಗೊಳಿಸಿರುತ್ತದೆ. ಅಲ್ಲದೆ ಕಾಫಿ ಗಿಡಗಳನ್ನು ಕೂಡ ಹಾನಿಗೊಳಿಸಿರುತ್ತದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಕಾಡಾನೆಗಳು ಅಲ್ಲದೆ ಕಾಡುಕೋಣಗಳು ಕೂಡ ಕಾಫಿ ತೋಟದೊಳಗೆ ಬೀಡುಬಿಟ್ಟಿವೆ. ವನ್ಯಪ್ರಾಣಿಗಳ ಹಾವಳಿಯಿಂದಾಗಿ ಕಾರ್ಮಿಕರು ಕಾಫಿ ತೋಟದೊಳಗೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.