ಸೋಮವಾರಪೇಟೆ, ಫೆ. ೧೧: ತಾಲೂಕಿನ ಯಲಕನೂರು-ಕಾಟಿಕೊಪ್ಪಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯದ ೨ನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜಾ ಕಾರ್ಯಕ್ರಮದಲ್ಲಿ ಮಂಗಳವಾದ್ಯದೊAದಿಗೆ ಕಲಶ ತಂದ ನಂತರ ದೇವಾಲಯದಲ್ಲಿ ಗಣಪತಿ ಹೋಮ, ತಾಯಿಗೆ ಕಲತತ್ವ ಹೋಮ, ಪಂಚಾಮೃತ ಅಭಿಷೇಕ ನಡೆಯಿತು. ನಂತರ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಊರಿಗೊಂದು ದೇವಾಲಯ ಇರಬೇಕು. ಅದರಲ್ಲಿ ಎಲ್ಲರೂ ದಿನದ ಅಲ್ಪ ಸಮಯವನ್ನು ಕಳೆಯುವಂತಾಗಬೇಕು. ಕೇವಲ ವಾರ್ಷಿಕೋತ್ಸವದಲ್ಲಿ ಮಾತ್ರ ಬಂದು ಹೋಗುವುದಕ್ಕೆ ಸೀಮಿತವಾಗಬಾರದು. ಗ್ರಾಮಗಳಲ್ಲಿ ಅಭಿವೃದ್ಧಿಯೊಂದಿಗೆ ಎಲ್ಲರೂ ಒಂದಾಗಿ ಬಾಳುವ ಮೂಲಕ ಸಾಮಾಜದ ಏಳಿಗೆಗೆ ಮುಂದಾಗಬೇಕೆAದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಬಸವರಾಜು ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿಗಳಾದ ವಿ.ಎಂ. ವಿಜಯ, ಚಿಟ್ಟಿಯಪ್ಪ ಮುತ್ತಣ್ಣ, ಸತೀಶ್, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕಿರಣ್, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಡಿ.ಯು. ಕಿರಣ್, ಸಮಿತಿ ಉಪಾಧ್ಯಕ್ಷ ಎನ್.ಎನ್. ಗಣೇಶ್, ಕಾರ್ಯದರ್ಶಿ ದಯಾನಂದ, ರಘುನಾಥ್, ಖಜಾಂಚಿ ಕೆ.ಪಿ. ಬಸವರಾಜು ಇದ್ದರು. ಎಲ್ಲ ಪೂಜಾ ಕಾರ್ಯಗಳು ಹುದುಗೂರಿನ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ನಡೆದವು.