ಶನಿವಾರಸಂತೆ, ಫೆ.೧೧: ಕಲ್ಲಿಗೊಂದು ರೂಪ ಕೊಟ್ಟು ಗುಡಿಕಟ್ಟಿ ಪೂಜಿಸುವ ವ್ಯವಸ್ಥೆಯೇ ಪೂಜಾ ಕೈಂಕರ್ಯವಾಗಿದ್ದು; ನೆಮ್ಮದಿ-ಶಾಂತಿಯ ಬದುಕಿಗೆ ದೇವಾಲಯ-ದೇವರ ಮೊರೆ ಹೋಗಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚನ್ನಾಪುರ ಗ್ರಾಮದ ಶ್ರೀಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಶ್ರೀಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಹಾಗೂ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ಮನೆಯಲ್ಲಿ ನೆಮ್ಮದಿ-ಶಾಂತಿ ಸಿಗದ ಸಮಯದಲ್ಲಿ ಮನುಷ್ಯ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಮಾಡಿ ದೇವಾಲಯ-ದೇವರಲ್ಲಿ ನೆಮ್ಮದಿ-ಶಾಂತಿ ಕಾಣುವಂತಾಗಿದೆ.ಭಾರತದ ಸಂಸ್ಕೃತಿಯಲ್ಲಿ ಧರ್ಮದ ತಳಹದಿಯಲ್ಲಿ ದೇವರನ್ನು ಗುರುತಿಸಲಾಗುತ್ತಿದೆ. ದೇವರು, ಸಂಸ್ಕಾರ, ಧರ್ಮದ ತಳಹದಿಯ ಮೇಲೆ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾನಿಧ್ಯ ವಹಿಸಿದ್ದ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಂಸಾರ ಸುಗಮವಾಗಲು ಸಂಸ್ಕಾರಬೇಕು. ದೇವಾಲಯ, ಮಠಮಂದಿರಗಳು ಅಧಿಕವಾದರೆ ಭಕ್ತರ ಸಂಖ್ಯೆಯೂ ಅಧಿಕಗೊಳ್ಳುತ್ತದೆ ಎಂದರು.
ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಸಂಸ್ಕಾರ ಮುಖ್ಯವಾಗಿದ್ದು ಸಂಸ್ಕಾರವಿಲ್ಲದವನ ಜೀವನ ವ್ಯರ್ಥ.ದೇವಾಲಯ,ಮಠಮಾನ್ಯಗಳಿಂದ ಸಂಸ್ಕಾರ ಪಡೆಯಲು ಸಾಧ್ಯ.ಪ್ರಾಥನೆ ಮೂಲಕ ದೇವರನ್ನು ಒಲಿಸಿಕೊಳ್ಳಬೇಕು ಎಂದರು.
ಚAಗಡಿಹಳ್ಳಿ-ಹೆಗ್ಗಡಹಳ್ಳಿ ಮಠದ ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ನಿಸ್ವಾರ್ಥತೆಯಿಂದ ಭಗವಂತನ ಆರಾಧನೆ ಮಾಡಿದರೆ ಮೋಕ್ಷ ಸಿದ್ಧಿಸುತ್ತದೆ. ದೇವಾಲಗಳಂತೆ ಶಾಲೆಗಳು ಮುಖ್ಯವಾಗಿದ್ದು ಧರ್ಮ, ಸಂಸ್ಕಾರದ ಆಸ್ತಿಯನ್ನು ಹೆತ್ತವರು ಮಕ್ಕಳಿಗೆ ನೀಡಬೇಕು. ದೇವರಿಗೆ ನಮಸ್ಕಾರ, ಗುರುಹಿರಿಯರಿಗೆ ಗೌರವ ತೋರುವ ಸಂಸ್ಕಾರ ಕಲಿಸಬೇಕು ಎಂದರು.
ಯಸಳೂರು ತೆಂಕಲಗೂಡು ಬ್ರಹನ್ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದರು. ಸಮಾರಂಭದಲ್ಲಿ ಮಠಾಧೀಶರು ದಾನಿಗಳಾದ ಜಿ.ಈ.ರಾಜು, ಜಯಪ್ಪ, ವೀರೇಶ್, ಬಿ.ಬಿ.ಶಾಂತಮಲ್ಲಪ್ಪ ಮತ್ತಿತರು ದಾನಿಗಳು ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಿ, ಗೌರವಿಸಿ, ಆಶೀರ್ವದಿಸಿದರು.
ಶ್ರೀಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಜಿ.ಈ.ರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸಿ.ಆರ್.ವೀರೇಶ್, ಕಾರ್ಯದರ್ಶಿ ಬಿ.ಸಿ.ಜಯಪ್ಪ, ಬಿ.ಎಸ್.ಮೋಹನ್ ಕುಮಾರ್ ಮತ್ತಿತರ ೧೦ ಮಂದಿ ನಿರ್ದೇಶಕರು, ಸದಸ್ಯರು, ದುಂಡಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೋಪಿಕಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ, ಗ್ರಾಮ ಪ್ರಮುಖರಾದ ಬಿ.ಎಸ್. ಸಂತೋಷ್ ಕುಮಾರ್, ಸಿ.ಎಂ.ಮಲ್ಲರಾಜು, ಸಿ.ಸಿ.ಶಿವಪ್ಪ, ಸಿ.ಸಿ.ದೇವರಾಜ್, ಎಸ್.ಪಿ.ರಾಜು, ಡಿ.ಬಿ.ಸೋಮಪ್ಪ ಇತರರು ಹಾಜರಿದ್ದರು. ಅರ್ಚಕರಾದ ಮಣಿಕಂಠ ಶಾಸ್ತ್ರಿ ಹಾಗೂ ಮಂಜೇಶ್ ಪ್ರಾರ್ಥಿಸಿದರು. ಉದ್ಯಮಿ ಮೋಹನ್ ಕುಮಾರ್ ಸ್ವಾಗತಿಸಿ, ಯಸಳೂರು ಸುಜಾತಾದೇವರಾಜ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.