ಪೆರಾಜೆ, ಫೆ. ೧೩: ಹಲವಾರು ವರ್ಷಗಳ ಜನರ ಬಹು ಬೇಡಿಕೆಯ ಅರಂತೋಡು- ತೊಡಿಕಾನ-ಪಟ್ಟಿ- ಭಾಗಮಂಡಲ ರಸ್ತೆ ಅಭಿವೃದ್ಧಿ ಮಾಡಲು ಕಾನೂನು ರೀತಿಯಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.
ಅರಂತೋಡು- ತೊಡಿಕಾನ-ಪಟ್ಟಿ- ಭಾಗಮಂಡಲ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಭಾ ಭವನದಲ್ಲಿ ರಸ್ತೆ ಅಭಿವೃದ್ಧಿ ಕುರಿತ ಸಮಾಲೋಚನಾ ಸಭೆ ನಡೆಯಿತು.
ಸಮಿತಿ ಪದಾಧಿಕಾರಿಗಳ ಅಭಿಪ್ರಾಯವನ್ನು ಆಲಿಸಿದ ಎ.ಎಸ್. ಪೊನ್ನಣ್ಣ ಮಾತನಾಡಿ, ಈ ರಸ್ತೆಯನ್ನು ವೀಕ್ಷಣೆ ಮಾಡಿದ್ದೇನೆ ಮತ್ತು ರಸ್ತೆಯ ಮಹತ್ವದ ಬಗ್ಗೆ ತಿಳಿದುಕೊಂಡಿದ್ದೇನೆ.
(ಮೊದಲ ಪುಟದಿಂದ) ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರಲ್ಲಿ ಮಾತನಾಡಿ ರಸ್ತೆ ಅಭಿವೃದ್ಧಿಯ ಸಾಧ್ಯತೆಗಳ ಬಗ್ಗೆ ಪರಾಮರ್ಶೆ ನಡೆಸುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಎ.ಎಸ್.ಪೊನ್ನಣ್ಣ ಅವರ ಜೊತೆ ಸೇರಿ ರಸ್ತೆ ಅಭಿವೃದ್ಧಿಗೆ ಎಲ್ಲಾ ಪ್ರಯತ್ನ ನಡೆಸುತ್ತೇನೆ. ಅರಣ್ಯ ಸಚಿವರು, ಕಂದಾಯ ಸಚಿವರು ಹಾಗೂ ಸಂಬAಧಪಟ್ಟವರ ಭೇಟಿ ಮಾಡಿ ರಸ್ತೆ ಅಭಿವೃದ್ಧಿಗೆ ಪ್ರಯತ್ನ ನಡೆಸುವುದಾಗಿ ಹೇಳಿದರು.
ಅರಂತೋಡು- ತೊಡಿಕಾನ-ಪಟ್ಟಿ- ಭಾಗಮಂಡಲ ರಸ್ತೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರಸ್ತೆ ಅಭಿವೃದ್ಧಿಯ ಪ್ರಾಧಾನ್ಯತೆ ಕುರಿತು ವಿವರಿಸಿದರು. ಎ.ಎಸ್. ಪೊನ್ನಣ್ಣ ಅವರು ಜೀಪಿನಲ್ಲಿ ಸಂಚರಿಸಿ ರಸ್ತೆಯನ್ನು ವೀಕ್ಷಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಭಾಗೀರಥಿ ಮುರುಳ್ಯ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಅರಂತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಪಕ್ ಕುತ್ತಮೊಟ್ಟೆ ವಂದಿಸಿದರು. ಭವಾನಿ ಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕರಿಕೆ ಗ್ರಾ.ಪಂ.ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಸಂಪಾಜೆ ಗ್ರಾ.ಪಂ.ಅಧ್ಯಕ್ಷೆ ಸುಮತಿ ಶಕ್ತಿವೇಲು, ಪ್ರಮುಖರಾದ ಪಿ.ಸಿ.ಜಯರಾಮ, ಹರೀಶ್ ಕಂಜಿಪಿಲಿ, ಟಿ.ಎಂ.ಶಹೀದ್ ತೆಕ್ಕಿಲ್, ಪಿ.ಎಸ್.ಗಂಗಾಧರ, ರಮಾನಾಥ್ ಕರಿಕೆ, ಕೆ.ಆರ್.ಗಂಗಾಧರ, ಇಸ್ಮಾಯಿಲ್ ನಾಪೋಕ್ಲು, ದಯಾನಂದ ಕುರುಂಜಿ, ಭವಾನಿ ಚಿಟ್ಟನ್ನೂರು, ಹರಿಣಿ ದೇರಾಜೆ, ಪ್ರಭಾಕರ ರೈ, ಎನ್.ಎ.ರಾಮಚಂದ್ರ, ಕೇಶವ ಕೊಳಲುಮೂಲೆ, ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲುಗದ್ದೆ, ಖಜಾಂಚಿ ವಿಜೇತ್ ಮರುವಳ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಪೆರಾಜೆ