ಮಡಿಕೇರಿ, ಫೆ. ೧೧: ನಗರದ ಸುದರ್ಶನ ವೃತ್ತದ ಬಳಿ ಇರುವ ಅಂಬೇಡ್ಕರ್ ಭವನವನ್ನು ಎಲ್ಲರಿಗೂ ಮುಕ್ತಗೊಳಿಸಿಕೊಡಬೇಕೆಂದು ಆಗ್ರಹಿಸಿ ನಿನ್ನೆದಿನ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿದ ವೇಳೆ ಭವನದ ಗೇಟಿಗೆ ಅಳವಡಿಸಲಾಗಿದ್ದ ಅಂಬೇಡ್ಕರ್ ಭಾವಚಿತ್ರವಿದ್ದ ಫ್ಲೆಕ್ಸ್ ಹಾಗೂ ಪ್ರತಿಭಟನಾ ಭಿತ್ತಿ ಫಲಕಗಳನ್ನು ಕಳೆದ ರಾತ್ರಿ ಸುಟ್ಟು ಹಾಕಲಾಗಿದೆ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಯಿತು.
ಹೋರಾಟ ಸಮಿತಿಯ ಅಧ್ಯಕ್ಷ ಹೆಚ್.ಎಲ್. ದಿವಾಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ ಮೋಹನ್ ಮೌರ್ಯ ನಿನ್ನೆ ದಿನ ಅಂಬೇಡ್ಕರ್ ಭವನಕ್ಕಾಗಿ ನಡೆಸಿದ್ದ ಪ್ರತಿಭಟನೆ ಯಶಸ್ವಿಯಾಗಿದ್ದು, ಅದರ ಅಂಗವಾಗಿ ಗೇಟಿಗೆ ಅಳವಡಿಸಲಾಗಿದ್ದ ಫ್ಲೆಕ್ಸ್ ಮತ್ತು ಭಿತ್ತಿ ಫಲಕಗಳನ್ನು ಕಿಡಿಗೇಡಿಗಳು ರಾತ್ರಿ ವೇಳೆ ಸುಟ್ಟು ಹಾಕಿದ್ದಾರೆ. ಇದು ಖಂಡನೀಯವಾಗಿದ್ದು, ಈ ದುಷ್ಕೃತ್ಯವೆಸಗಿದವರನ್ನು ತಕ್ಷಣ ಬಂಧಿಸಬೇಕೆAದು ಒತ್ತಾಯಿಸಿದರು.
ಸ್ಥಳದಲ್ಲಿದ್ದ ಅಂಬೇಡ್ಕರ್ ಭವನ ಸಮಿತಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಫ್ಲೆಕ್ಸ್ ಸುಟ್ಟ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿ ತನ್ನ ವಿರುದ್ಧ ಆರೋಪ ಮಾಡುತ್ತಿರುವವರೇ ಈ ವಿವಾದವನ್ನು ಇನ್ನಷ್ಟು ದೊಡ್ಡದು ಮಾಡುವ ಉದ್ದೇಶದಿಂದ ಈ ಕೃತ್ಯ ವೆಸಗಿರಬಹುದೆಂದು ಆರೋಪಿಸಿದರು.
ಹೆಚ್.ಎಲ್. ದಿವಾಕರ್ ಮಾತನಾಡಿ, ನಿನ್ನೆ ದಿನ ಅಂಬೇಡ್ಕರ್ ಭವನ ದಲಿತರೂ ಸೇರಿದಂತೆ ಎಲ್ಲರಿಗೂ ಉಪಯೋಗಕ್ಕೆ ಸಿಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗಿತ್ತು. ಆದರೆ ಪ್ರತಿಭಟನೆ ವೇಳೆ ಭವನದ ಗೇಟ್‌ಗೆ ಅಳವಡಿಸಿದ್ದ ಅಂಬೇಡ್ಕರ್ ಭಾವಚಿತ್ರವಿದ್ದ ಫ್ಲೆಕ್ಸ್ ಅನ್ನು ನಿನ್ನೆ ರಾತ್ರಿ ಸುಟ್ಟು ಹಾಕಲಾಗಿದೆ. ಫ್ಲೆಕ್ಸ್ ಸುಟ್ಟು ಹಾಕಿದ ಕಿಡಿಗೇಡಿಗಳನ್ನು ೨೪ ಗಂಟೆಯೊಳಗಾಗಿ ಬಂಧಿಸದಿದ್ದರೆ ಹೋರಾಟ ಮಾಡಲಾಗುವುದೆಂದರು.
ಮಾತಿನ ಚಕಮಕಿ
ಘಟನಾ ಸ್ಥಳಕ್ಕೆ ನಗರ ವೃತ್ತ ನಿರೀಕ್ಷಕ ರಾಜು ಹಾಗೂ ಠಾಣಾಧಿಕಾರಿ ಶ್ರೀಧರ್ ಅವರು ಆಗಮಿಸಿದ ಸಂದರ್ಭ ಪೊಲೀಸರ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ನಗರಸಭಾ ಸದಸ್ಯ ಸತೀಶ್ ಆರೋಪ ಮಾಡಿದರು. ಈ ಸಂದರ್ಭ ರಾಜು ಹಾಗೂ ಸತೀಶ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾತನಾಡಿದ ರಾಜು ಅವರು “ನೀವು ಪ್ರತಿಭಟನೆಗೆ ಅನುಮತಿ ಪಡೆದಿದ್ದೀರಿ ಹೊರತು ಭವನದ ಗೇಟಿಗೆ ಬೀಗ ಹಾಕಲು ಫ್ಲೆಕ್ಸ್ ಹಾಕಲು ಅನುಮತಿ ಪಡೆದಿರಲಿಲ್ಲ. ಆದರೂ ಅಳವಡಿಸಿದ ಮೇಲೆ ಅದನ್ನು ತೆಗೆದಿಡಬೇಕಾದ ಜವಾಬ್ದಾರಿ ನಿಮ್ಮದು. ವಿನಾಕಾರಣ ಪೊಲೀಸರ ಮೇಲೆ ಆರೋಪ ಮಾಡಬೇಡಿ. ಪೊಲೀಸರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಮಾಡುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.
ದೀಪಕ್ ಪೊನ್ನಪ್ಪ, ಕುಮಾರ್, ದೇವರಾಜ್, ಪ್ರೇಮಾ, ಪಾಪಣ್ಣ, ಮತ್ತಿತರರು ಪಾಲ್ಗೊಂಡಿದ್ದರು.