ಶನಿವಾರಸಂತೆ, ಫೆ. ೧೧: ಸಮೀಪದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟಿçÃಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ದಂತ ಭಾಗ್ಯ ಯೋಜನೆ, ತಾಲೂಕು ಆರೋಗ್ಯಾ ಧಿಕಾರಿಗಳ ಕಚೇರಿ, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವೀರಾಜಪೇಟೆ ಕೊಡಗು ದಂತ ಮಹಾವಿದ್ಯಾಲಯ ಸಹಯೋಗದೊಂದಿಗೆ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶಿಬಿರ ಉದ್ಘಾಟಿಸಿದ ವೈದ್ಯಾಧಿಕಾರಿ ಡಾ. ಅಫ್ರಿನ್ ಮಾತನಾಡಿ, ದಂತದ ಶುಚಿತ್ವ, ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಶಿಬಿರದ ಮಹತ್ವವನ್ನು ತಿಳಿಸಿ, ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಧನಿಕಾ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಆರೋಗ್ಯ ಉಚಿತ ಶಿಬಿರದ ಸೇವೆಯನ್ನು ಸಾರ್ವಜನಿಕರು ಸದ್ವಿನಿಯೋಗ ಮಾಡಿಕೊಳ್ಳುವಂತೆ ಸೂಚಿಸಿದರು.
ಶಿಬಿರದಲ್ಲಿ ೮೫ ಫಲಾನುಭವಿಗಳು ಉಚಿತ ಆರೋಗ್ಯ ಸೇವೆಯನ್ನು ಪಡೆದುಕೊಂಡರು. ೨೪ ಮಂದಿ ಚಿಕಿತ್ಸೆ ಪಡೆದುಕೊಂಡರು. ೪೫ ಮಂದಿ ತಪಾಸಣೆಗೊಳಗಾದರು. ೧೫ ಮಂದಿ ವಿಶೇಷ ಚಿಕಿತ್ಸೆ ಪಡೆದರು.
ಶಿಬಿರದಲ್ಲಿ ವೀರಾಜಪೇಟೆ ಕೊಡಗು ದಂತ ಮಹಾವಿದ್ಯಾಲಯದ ದಂತ ವೈದ್ಯರು, ಶನಿವಾರಸಂತೆ ಆರೋಗ್ಯ ಕೇಂದ್ರ ದಂತ ವೈದ್ಯಾಧಿಕಾರಿ ಡಾ. ಬಿಪಿನ್ ಜೋಸ್, ಡಾ. ಚೇತನ್, ಹಿರಿಯ ಆರೋಗ್ಯ ಸಹಾಯಕಿ ಸರಸ್ವತಿ, ಮೇಲ್ವಿಚಾರಕ ಗಿರೀಶ್, ಸಿಬ್ಬಂದಿ ಪ್ರವೀಣ್, ತಾಲೂಕು ಶಿಕ್ಷಣಾಧಿಕಾರಿ ಮಂಜುಳಾ, ಶುಶ್ರೂಷಕಿಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಿದರು.