ಮಡಿಕೇರಿ, ಫೆ. ೧೧: ಹೃದಯಾಘಾತದಿಂದ ಆಹಾರ ಇಲಾಖೆಯ ಅಧಿಕಾರಿ ಕಚೇರಿಯಲ್ಲೆ ಮೃತಪಟ್ಟ ಘಟನೆ ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಜೆ.ಬಿ. ಶ್ರೀಧರ್ ಮೂರ್ತಿ(೫೯) ಮೃತಪಟ್ಟ ಅಧಿಕಾರಿ. ಕಳೆದ ಒಂದು ತಿಂಗಳ ಹಿಂದೆ ಕೊಡಗು ಜಿಲ್ಲೆಗೆ ವರ್ಗಾವಣೆಯಾಗಿ ಕೆಲಸ ಮಾಡುತ್ತಿದ್ದ ಶ್ರೀಧರ್ ಮೂರ್ತಿ ಅವರು ಮಂಗಳವಾರ ಬೆಳಗ್ಗೆ ಕಚೇರಿಗೆ ಪ್ರವೇಶಿಸುತ್ತಿದ್ದಂತೆ ಕಚೇರಿಯೊಳಗೆ ಕುಸಿದು ಬಿದ್ದಿದ್ದಾರೆ. ಅಲ್ಲೇ ಇದ್ದ ಕಚೇರಿಯ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಅಷ್ಟರಾಗಲೇ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಶ್ರೀಧರ್ ಮೂರ್ತಿ ಜನವರಿ ೧೩ ರಂದು ಕೊಡಗು ಜಿಲ್ಲೆಗೆ ವರ್ಗಾವಣೆಗೊಂಡು ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಇಲಾಖೆಯ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಮುಂದಿನ ೬ ತಿಂಗಳಿನಲ್ಲಿ ಕರ್ತವ್ಯದಿಂದ ನಿವೃತ್ತ ಹೊಂದಬೇಕಿದ್ದ ಇವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.