ಮಡಿಕೇರಿ, ಫೆ. ೧೧: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಚುನಾವಣೆ ತಾ.೧೬ ರಂದು ನಿಗದಿಯಾಗಿದೆ. ಒಟ್ಟು ೧೫ ನಿರ್ದೇಶಕರ ಆಯ್ಕೆ ನಡೆಯಬೇಕಿದ್ದು, ಇದೀಗ ೧೧ ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನುಳಿದಂತೆ ಮಡಿಕೇರಿ ತಾಲೂಕಿನ ಮೂರು ಸಾಮಾನ್ಯ ಕ್ಷೇತ್ರ ಹಾಗೂ ಜಿಲ್ಲಾಮಟ್ಟದ ಪರಿಶಿಷ್ಟ ಮೀಸಲು ಕ್ಷೇತ್ರದ ೧ ಸ್ಥಾನ ಸೇರಿ ಕೇವಲ ನಾಲ್ಕು ಸ್ಥಾನಗಳಿಗೆ ಚುನಾವಣೆ ಅನಿವಾರ್ಯವಾಗಿದೆ. ನಾಮಪತ್ರ ಹಿಂಪಡೆಯಲು ತಾ.೧೦ ಕೊನೆಯ ದಿನವಾಗಿದ್ದು, ಉಮೇದುವಾರಿಕೆ ಸಲ್ಲಿಸಿದ್ದ ಹಲವರು ತಮ್ಮ ನಾಮಪತ್ರ ಹಿಂಪಡೆದಿದ್ದು, ೧೧ ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಯರ‍್ಯಾರು..?: ಮಡಿಕೇರಿ ತಾಲೂಕಿನ ಮೂರು ಸಾಮಾನ್ಯ ಕ್ಷೇತ್ರ, ವೀರಾಜಪೇಟೆ-ಪೊನ್ನಂಪೇಟೆಯಿAದ ನಾಲ್ಕು ಸಾಮಾನ್ಯ ಕ್ಷೇತ್ರ, ಸೋಮವಾರಪೇಟೆ-ಕುಶಾಲನಗರ ಸೇರಿ ೯ ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಜಾತಿ ೧, ಪರಿಶಿಷ್ಟ ಪಂಗಡ ೧, ಮಹಿಳಾ ಮೀಸಲು ೨ ಹಾಗೂ ಪ್ರವರ್ಗ ಎ ಸ್ಥಾನದಿಂದ ೨ ನಿರ್ದೇಶಕರ ಆಯ್ಕೆ ನಡೆಯಬೇಕಿತ್ತು. ಇದೀಗ ವೀರಾಜಪೇಟೆಯ ನಾಲ್ಕು ಸಾಮಾನ್ಯ ಕ್ಷೇತ್ರದಿಂದ ಮಾಚಿಮಂಡ ಸುವಿನ್ ಗಣಪತಿ, ಪಳೆಯಂಡ ರಾಬಿನ್ ದೇವಯ್ಯ, ಸಂದೀಪ್ ಕಾಕೂರು ಹಾಗೂ ಸುರೇಶ್ ಮಾಯಮುಡಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ-ಕುಶಾಲನಗರ ತಾಲೂಕಿನಿಂದ ತಾಕೇರಿ ಎಸ್.ಪೊನ್ನಪ್ಪ, ಗೌತಮ್ ಕುಮಾರ್, ಸಾಮಾನ್ಯ ಕ್ಷೇತ್ರದಿಂದ ಅವಿರೋಧ ಆಯ್ಕೆಗೊಂಡಿದ್ದಾರೆ. ಜಿಲ್ಲಾಮಟ್ಟದ ಮಹಿಳಾ ಮೀಸಲು ಕ್ಷೇತ್ರದಿಂದ ಚೆಟ್ರಂಡ ಲೀಲಾ ಮೇದಪ್ಪ ಹಾಗೂ ಕಡ್ಲೇರ ತುಳಸಿ ಮೋಹನ್ ಆಯ್ಕೆಗೊಂಡಿದ್ದಾರೆ.
ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಮನು ಮಹೇಶ್ ಹಾಗೂ ಡಿ.ಯು. ವರದರಾಜೇ ಅರಸ್ ಅವಿರೋಧವಾಗಿ ನೇಮಕಗೊಂಡಿದ್ದಾರೆ. ಪರಿಶಿಷ್ಟ ಮೀಸಲು ಪಂಗಡದಿAದ ಹಾಲುಮತದ ಎಸ್. ಮಹೇಶ್ ಆಯ್ಕೆಗೊಂಡಿದ್ದಾರೆ.
ನಾಲ್ಕು ಸ್ಥಾನಕ್ಕೆ ಚುನಾವಣೆ: ಮಡಿಕೇರಿ ತಾಲೂಕಿನ ೩ ಸಾಮಾನ್ಯ ಕ್ಷೇತ್ರ ಹಾಗೂ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಮಾತ್ರ ಇದೀಗ ಚುನಾವಣೆ ಅನಿವಾರ್ಯವಾಗಿದೆ. ಸಾಮಾನ್ಯ ಕ್ಷೇತ್ರಕ್ಕೆ ೬ ಹಾಗೂ ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ. ಮಡಿಕೇರಿ ತಾಲೂಕಿನ ಸಾಮಾನ್ಯ ಕ್ಷೇತ್ರದಿಂದ ಹಾಲಿ ಅಧ್ಯಕ್ಷರಾಗಿರುವ ಎಂ.ಬಿ. ದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ನಾಪಂಡ ರವಿ ಕಾಳಪ್ಪ, ಚೆಟ್ಟಿಮಾಡ ಎಲ್. ಪ್ರಶಾಂತ್ ಹಾಗೂ ಕಿಮ್ಮುಡಿರ ಜಗದೀಶ್, ಬಿದ್ದಾಟಂಡ ಎಸ್. ತಮ್ಮಯ್ಯ ಹಾಗೂ ಸೂದನ ಎಸ್. ಈರಪ್ಪ ಕಣದಲ್ಲಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಕಿರಗಂದೂರಿನ ಕೆ.ಎಂ. ರುಕ್ಮಿಣಿ ಅವರುಗಳು ಎದುರಾಳಿಗಳಾಗಿದ್ದಾರೆ. ತಾ.೧೬ರಂದು ಮಡಿಕೇರಿಯ ಬಾಲಭವನದಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೪ರತನಕ ಮತದಾನ ಜರುಗಲಿದೆ.