ಮಡಿಕೇರಿ, ಫೆ. ೧೨: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಅಧಿಕಾರಿಗಳ ತಂಡದೊAದಿಗೆ ಕಾಲೂರು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವದರೊಂದಿಗೆ ಪರಿಹಾರದ ಭರವಸೆಯನ್ನು ನೀಡಿದರು.

ನಿವಾಸಿಗಳ ಕೋರಿಕೆ ಮೇರೆಗೆ ಗ್ರಾಮಕ್ಕೆ ಮಂತರ್ ಗೌಡ ತೆರಳಿದರು. ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ತಿಳಿದುಕೊಳ್ಳುವ ಸಲುವಾಗಿ ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್, ಕುಡಿಯುವ ನೀರು ಸರಬರಾಜು ಇಲಾಖೆಗಳ ಅಧಿಕಾರಿಗಳು ಸೇರಿದಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಸ್ಥಳೀಯ ಗ್ರಾ.ಪಂ. ಅಧಿಕಾರಿಗಳನ್ನು ಕರೆಸಿಕೊಂಡು ಸಭೆ ನಡೆಸಿ ವಸ್ತುಸ್ಥಿತಿ ತಿಳಿಯುವ ಪ್ರಯತ್ನ ನಡೆಸಿದರು.

ಕಳೆದ ೧೫ ವರ್ಷಗಳಿಂದ ಕಾಮಗಾರಿ ಆರಂಭಗೊAಡು ಪೂರ್ಣಗೊಳ್ಳದ ಸೇತುವೆ ಕಾಮಗಾರಿ, ದಶಕಗಳ ಕಾಲದಿಂದ ಹದಗೆಟ್ಟಿರುವ ರಸ್ತೆಗಳು, ವಿಪುಲವಾಗಿ ಜಲಮೂಲಗಳಿದ್ದರೂ ಕುಡಿಯುವ ನೀರಿಗೆ ಆಗುತ್ತಿರುವ ಪರದಾಟ, ವಿದ್ಯುತ್ ಕಂಬಗಳ ದುಸ್ಥಿತಿ, ಪ್ರತಿನಿತ್ಯ ವೋಲ್ಟೇಜ್ ಸಮಸ್ಯೆಗಳು, ಸಾರಿಗೆ ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಕುರಿತು ಸ್ಥಳೀಯರು ಶಾಸಕರ ಗಮನ ಸೆಳೆದರು.

ಸಮಸ್ಯೆಗಳನ್ನು ಆಲಿಸಿದ ಶಾಸಕ ಡಾ. ಮಂತರ್ ಗೌಡ ಅಧಿಕಾರಿ ಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಬಹುಮಟ್ಟಿಗೆ ಬಗೆಹರಿಸಲು ಕ್ರಮ ಕೈಗೊಂಡರು. ಕೆ.ಎಸ್.ಆರ್,ಟಿ,ಸಿ ಅಧಿಕಾರಿಗಳಿಗೆ ಕರೆ ಮಾಡಿ ಈ ಭಾನುವಾರದಿಂದಲೇ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಲು ನಿರ್ದೇಶನ ನೀಡಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಹದಿನೈದು ದಿನಗಳಲ್ಲಿ ನೀರಿನ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದರು. ಕೂಟುಹೊಳೆಯಿಂದ ಗಾಳಿಬೀಡು ರಸ್ತೆ ಮರುನಿರ್ಮಾಣಕ್ಕೆ ಮೂರು ಕೋಟಿ ಹಣ ನೀಡಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಇದೇ ಸಂದರ್ಭ ಮಾಹಿತಿ ನೀಡಿದರು.

ದೇವಸ್ತೂರು ಕಾಲೂರು ಬಾರಿಬೆಳ್ಳಚ್ಚು ಮೂಲಕ ಮಾಂದಲಪಟ್ಟಿಗೆ ಹೋಗುವ ಪಿ.ಡಬ್ಲ್ಯೂ.ಡಿ. ರಸ್ತೆಯ ಅಂದಾಜು ಪಟ್ಟಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಮಂತರ್ ಗೌಡ, ಮೂರು ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್‌ಗಳನ್ನು ಗ್ರಾಮದ ವಿವಿಧ ಭಾಗಗಳಲ್ಲಿ ಅಳವಡಿಸಲು ಚೆಸ್ಕಾಂ ಇಲಾಖೆಗೆ ಆದೇಶ ನೀಡಿದರು.

ಕಾಲೂರು ಶಾಲೆಯಿಂದ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಪಂಚಾಯತ್ ರಾಜ್ ಇಂಜಿನಿಯರ್‌ಗೆ ಸೂಚನೆ ನೀಡಿದರು.

ಡಾ ಮಂತರ್ ಗೌಡ ಮಾತನಾಡಿ, ತಮ್ಮ ಕ್ಷೇತ್ರದ ಎಲ್ಲಾ ಗ್ರಾಮಗಳು ಕುಗ್ರಾಮ ಎಂಬ ಹಣೆಪಟ್ಟಿ ಕಳಚಿ ಸುಗ್ರಾಮಗಳಾಗಿ ಬದಲಾಗ ಬೇಕು ಎಂಬುದು ತಮ್ಮ ಹೆಬ್ಬಯಕೆ ಯಾಗಿದ್ದು, ಅದನ್ನು ಪೂರ್ಣ ಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಪ್ರಮುಖರಾದ ಕೋಚನ ಹರಿಪ್ರಸಾದ್, ವಿ.ಜಿ. ಮೋಹನ್, ರೋಶನ್ ಗಣಪತಿ, ಪೊನ್ನಪ್ಪ, ತಿಮ್ಮಯ್ಯ, ಪವನ್, ಸಾಗರ್, ಕವನ್, ಅರ್ಜುನ್, ಶರಣ್ ಸೇರಿದಂತೆ ಗ್ರಾಮಸ್ಥರು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.