ಸೋಮವಾರಪೇಟೆ, ಫೆ. ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿಯೂ ನಿರಂತರ ಸೇವೆಯನ್ನು ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರೋಹಿತ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಮೂಲಕ ಜ್ಞಾನದೀಪ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ವಿಶೇಷ ಅನುದಾನ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಡೆಸ್ಕ್ ಮತ್ತು ಬೆಂಚುಗಳನ್ನು ವಿತರಿಸಿ ಅವರು ಮಾತನಾಡಿದರು.
ರಾಜ್ಯದಾದ್ಯಂತ ಪೀಠೋಪಕರಣ ಗಳ ಕೊರತೆಯಿರುವ ಸರಕಾರಿ ಶಾಲೆಗಳಿಗೆ ಡೆಸ್ಕ್ ಮತ್ತು ಬೆಂಚುಗಳನ್ನು ಒದಗಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ೧೫ ಸರಕಾರಿ ಶಾಲೆಗಳಿಗೆ ಸುಮಾರು ರೂ. ೧೧,೩೨,೫೦೦ ಮೌಲ್ಯದ ೧೪೫ ಸೆಟ್ ಡೆಸ್ಕ್ ಮತ್ತು ಬೆಂಚುಗಳನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್. ಗೀತಾ ಮಾತನಾಡಿ, ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಕಳೆಯಿತು ಎಂದು ಪೋಷಕರು ಭಾವಿಸಬಾರದು. ತಿಂಗಳಿಗೊಮ್ಮೆಯಾದರೂ ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಬೇಕು. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯಲ್ಲಿ ವಿದ್ಯಾರ್ಥಿ, ಶಿಕ್ಷಕ ಹಾಗೂ ಪೋಷಕರ ಸಮನ್ವಯತೆ ಇರಬೇಕು ಎಂದರು.
ವೇದಿಕೆಯಲ್ಲಿ ಚೌಡ್ಲು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷ ನತೀಶ್ ಮಂದಣ್ಣ, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಮುಖ್ಯ ಶಿಕ್ಷಕಿ ಯಶೋಧ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.