ಮಡಿಕೇರಿ, ಫೆ. ೧೧: ಬೆನ್ನುಹುರಿ ಅಪಘಾತಕ್ಕೊಳಗಾದ ವಿಶೇಷಚೇತನರಿಗೆ ಉಚಿತವಾಗಿ ವಸತಿಯುತವಾಗಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ಜಾಗೃತಿ ಮತ್ತು ಗಾಲಿ ಕುರ್ಚಿ ಜಾಥಾ ಕಾರ್ಯಕ್ರಮ ತಾ.೧೩, ೧೪ ಹಾಗೂ ೧೫ ರಂದು ೩ ದಿನಗಳ ಕಾಲ ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ನಡೆಯಲಿದೆ.

ಬೆಳ್ತಂಗಡಿ ತಾಲೂಕಿನ ಸೇವಾಭಾರತಿ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಮಡಿಕೇರಿಯ ವಿಕಾಸ್ ಜನಸೇವಾ ಟ್ರಸ್ಟ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಕಾರದಿಂದ ಶಿಬಿರ ನಡೆಯಲಿದೆ ಎಂದು ಸೇವಾಭಾರತಿಯ ಖಜಾಂಚಿ ವಿನಾಯಕ್ ರಾವ್ ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೇವಾಭಾರತಿಯು ೨೦೦೪ರಲ್ಲಿ ಪ್ರಾರಂಭಗೊAಡಿದ್ದು, ಕಳೆದ ೧೯ ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ನೆರವೇರಿಸುತ್ತಾ ಬಂದಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಒಟ್ಟು ೨೮ ಶಿಬಿರಗಳನ್ನು ನಡೆಸಿ ಬೆನ್ನುಹುರಿಗೆ ಒಳಗಾದ ೭೧೭ ಮಂದಿಯನ್ನು ಗುರುತಿಸಿ ಅವರನ್ನು ಪುನಶ್ಚೇತನಗೊಳಿಸುವ ಕಾರ್ಯ ನಡೆಯುತ್ತಿದೆ. ಕೊಡಗಿನಲ್ಲಿ ಇಂತಹ ೨೫ ಮಂದಿಯನ್ನು ಗುರುತಿಸಿ ಮಾನಸಿಕ ಖಿನ್ನತೆಗೆ ಒಳಗಾದವರಿಗೆ ಉಚಿತವಾಗಿ ವೈದ್ಯಕೀಯ ತಪಾಸಣಾ ಶಿಬಿರ ಸೇರಿದಂತೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು.

ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಮೋಹನ್‌ದಾಸ್ ಅವರು ಮಾತನಾಡಿ, ಈ ಶಿಬಿರಕ್ಕೆ ಹೆಚ್ಚಿನ ಪ್ರಚಾರ ದೊರಕಬೇಕು. ಅಶ್ವಿನಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಆಧುನಿಕ ಸೌಲಭ್ಯಗಳು ಇದ್ದು ಸೇವಾಭಾರತಿ ಸಂಸ್ಥೆಯು ಈ ಶಿಬಿರವನ್ನು ಇಲ್ಲಿ ಆಯೋಜಿಸುತ್ತಿದ್ದು, ಇದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.

ಶಿಬಿರವು ತಾ.೧೩ ರಿಂದಲೇ ಪ್ರಾರಂಭವಾಗಲಿದೆ. ತಾ.೧೪ ರಂದು ಶಾಸಕ ಡಾ.ಮಂತರ್ ಗೌಡ ಕಾರ್ಯಕ್ರಮವನ್ನು ಬೆ.೧೧ ಗಂಟೆಗೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿನಾಯಕ್ ರಾವ್ ಅವರು ವಹಿಸಲಿದ್ದಾರೆ. ಗಾಲಿಕುರ್ಚಿ ಜಾಥಾಕ್ಕೆ ತಾ.೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಚಾಲನೆ ನೀಡಲಿದ್ದಾರೆ. ಜಾಥಾವು ರಾಜಾಸೀಟ್‌ನಿಂದ ಪ್ರಾರಂಭವಾಗಿ ಜನರಲ್ ಕೆ.ಎಸ್ ತಿಮ್ಮಯ್ಯ ವೃತ್ತದತ್ತ ಸಾಗಿ ಅಶ್ವಿನಿ ಆಸ್ಪತ್ರೆಯಲ್ಲಿ ಸಮಾಪ್ತಿಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ವಿಕಾಸ್ ಜನಸೇವಾ ಟ್ರಸ್ಟ್ನ ಗೌರವಾಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಜಯ್ ಸೂದ್, ವಿಕಾಸ್ ಜನಸೇವಾ ಟ್ರಸ್ಟ್ನ ಖಜಾಂಚಿ ನವೀನ್ ಹಾಗೂ ಸದಸ್ಯರಾದ ಕೋಚನ ಚೇತನ್ ಹಾಜರಿದ್ದರು.