ಮಡಿಕೇರಿ, ಫೆ. ೧೨ : ನಗರದಲ್ಲಿ ಮೂರು ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

೨೦೨೩-೨೪ ನೇ ಸಾಲಿನ ತಮ್ಮ ವಿಶೇಷ ಅನುದಾನದಲ್ಲಿ ಒಟ್ಟು ಮೂರು ಕೋಟಿ ರೂಗಳನ್ನು ಮಡಿಕೇರಿ ನಗರದ ಅಭಿವೃದ್ಧಿಗೆ ಮೀಸಲಿರಿಸುವುದಾಗಿ ತಿಳಿಸಿದ ಡಾ ಮಂತರ್ ಗೌಡ ರವರು ಮಡಿಕೇರಿ ನಗರದ ಎಲ್ಲಾ ರಸ್ತೆಗಳನ್ನು ಉತ್ತಮ ಗುಣಮಟ್ಟದ ಸರ್ವಋತು ರಸ್ತೆ ನಿರ್ಮಾಣದ ಆಶಯ ತಮ್ಮದಾಗಿದ್ದು ಅದನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು. ಮಡಿಕೇರಿ ನಗರದ ಕಾನ್ವೆಂಟ್ ಸಮೀಪ ರಸ್ತೆ, ಎಫ್.ಎಂ.ಸಿ. ಕಾಲೇಜು ಹಿಂಭಾಗದ ರಸ್ತೆ, ಮುಳಿಯ ಬಡಾವಣೆ ರಸ್ತೆ, ಮೊಣಪ್ಪ ಗ್ಯಾರೇಜ್ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ಮುಂಭಾಗದ ರಸ್ತೆ, ಗೌಳಿಬೀದಿ ರಸ್ತೆ, ಬಸಪ್ಪ ಶಿಶುವಿಹಾರ ರಸ್ತೆ, ಅಬ್ದುಲ್ ಕಲಾಂ ಲೇಔಟ್ ಮೈದಾನದ ಕಾಮಗಾರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಏಪ್ರಿಲ್ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿಗಳು ಮುಗಿಯಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ ಡಾ. ಮಂತರ್ ಗೌಡ, ಆದ್ಯತೆ ಮೇರೆಗೆ ಮತ್ತಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಪೌರಾಯುಕ್ತ ರಮೇಶ್, ಮೂಡ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ತೆನ್ನಿರ ಮೈನಾ, ಪ್ರಮುಖರಾದ ಪ್ರಕಾಶ್ ಆಚಾರ್ಯ, ಜಿ.ಸಿ. ಜಗದೀಶ್, ಮುದ್ದುರಾಜ್, ಆರ್.ಪಿ. ಚಂದ್ರಶೇಖರ್, ಮೀನಾಜ್ ಪ್ರವೀಣ್, ಶಶಿ, ಕವನ್ ಕೊತ್ತೊಳಿ, ವಿ.ಜಿ. ಮೋಹನ್, ಅರ್ಜುನ್, ಶರಣ್, ಕಲೀಲ್ ಬಾಷ, ಹನೀಫ್, ಸೇರಿದಂತೆ ನಗರ ಸಭೆಯ ಸದಸ್ಯರುಗಳು, ನಗರ ಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.