ಪೊನ್ನಂಪೇಟೆ, ಫೆ. ೧೨: ಸಮಾಜದಲ್ಲಿ ಇಂದು ನೆಮ್ಮದಿ ಯಿಂದ ಬದುಕಲು ಪರಸ್ಪರ ಮತ ಸೌಹಾರ್ದತೆ ತೀರ ಅಗತ್ಯ. ಜನರು ತಮ್ಮ ತಮ್ಮ ಧರ್ಮಗಳ ಮೂಲ ಆಶಯಗಳನ್ನು ಅರಿತುಕೊಂಡರೆ ದ್ವೇಷಗಳಿಗೆ ಅವಕಾಶವೇ ಇರುವು ದಿಲ್ಲ. ದ್ವೇಷ ಸಂಪೂರ್ಣವಾಗಿ ದೂರವಾದರೆ ಸಹಜವಾಗಿಯೇ ಮತಸೌಹಾರ್ದತೆ ಮೂಡುತ್ತದೆ. ಮತ ಸೌಹಾರ್ದತೆಯಿಂದ ಮಾತ್ರ ಸರ್ವ ಜನಾಂಗದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಕೊಡವ ಮುಸ್ಲಿಂ ಅಸೋಸಿ ಯೇಷನ್(ಕೆ.ಎಂ.ಎ.)ನ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟರು.
ವೀರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ಅಂಬಟ್ಟಿ ಮಖಾಂ ಉರೂಸ್‌ನ ಪ್ರಮುಖ ದಿನದ ಅಂಗವಾಗಿ ಮಖಾಂ ಆವರಣದಲ್ಲಿ ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಕೋಮು ಸೌಹಾರ್ದತೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ಉರೂಸ್‌ಗಳ ಪಾತ್ರ ಮಹತ್ವದ್ದಾಗಿದೆ. ಸೂಫಿ ಸಂತರ ಹೆಸರಿನಲ್ಲಿ ನಡೆಯುವ ಜಿಲ್ಲೆಯ ಎಲ್ಲಾ ಉರೂಸ್‌ಗಳು ಮನುಷ್ಯ ಸ್ನೇಹದ ಮೂಲಕ ಎಲ್ಲ ಧರ್ಮದ ಜನರನ್ನು ಪರಸ್ಪರ ಒಗ್ಗೂಡಿಸುವಲ್ಲಿ ದೊಡ್ಡ ಕೊಡುಗೆಗಳನ್ನು ನೀಡುತ್ತಿದೆ ಎಂದು ಹೇಳಿದರು.
ಧಾರ್ಮಿಕ ಆಚರಣೆಯಾಗಿರುವ ಉರೂಸ್‌ಗಳು ಸಂವಿಧಾನದ ಮೂಲ ಆಶಯವಾದ ಸರ್ವರೂ ಸಮಾನರು ಎಂಬ ಅಂಶಕ್ಕೆ ಪೂರಕವಾಗಿದೆ. ಜೊತೆಗೆ ವರ್ಗ ರಹಿತ, ಜಾತ್ಯತೀತ ನಿಲುವಿಗೆ ಆಸರೆ ಯಂತಿದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬೇರೆ ಬೇರೆ ಕಾರಣ ಗಳಿಂದ ಮನುಷ್ಯ ಮನಸ್ಸುಗಳ ಮಧ್ಯೆ ಕಂದಕಗಳು ಸೃಷ್ಟಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಸಹೋದರತೆಯ ಸಂದೇಶ ಸಾರಲು ಕೊಡಗಿನ ಉರೂಸ್‌ಗಳು ಪ್ರೇರಣಾದಾ ಯಕವಾಗಿದೆ ಎಂದು ಹೇಳಿದ ಸೂಫಿ ಹಾಜಿ, ಪಾಲಿಬೆಟ್ಟ ಉರೂಸ್‌ಅನ್ನು ಹೊರತುಪಡಿಸಿದರೆ ದಕ್ಷಿಣ ಕೊಡಗಿನಲ್ಲಿ ಎಲ್ಲ ಧರ್ಮಿಯರ ಸಂಗಮಕ್ಕೆ ವೇದಿಕೆ ಯಾಗಿರುವ ಅಂಬಟ್ಟಿ ಉರೂಸ್ ಜನ ಸಮುದಾಯಕ್ಕೆ ನೀಡುತ್ತಿರುವ ಭಾವೈಕ್ಯತೆಯ ಸಂದೇಶ ಇಂದಿನ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದು ತಿಳಿಸಿದರು. ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಯುವ ವಿದ್ವಾಂಸ ನೌಫಲ್ ಸಖಾಫಿ ಕಳಸ, ೧೨ನೇ ಶತಮಾನದಲ್ಲಿ ಭಾರತವನ್ನು ಪ್ರವೇಶಿಸಿ ೧೩ನೇ ಶತಮಾನದಲ್ಲಿ ಜನಪ್ರಿಯತೆಯನ್ನು ಗಳಿಸಿದ ಸೂಫಿ ಸಂತರು ವಿಶಾಲ ದೃಷ್ಟಿಕೋನದ ಜಾತ್ಯತೀತ ತತ್ವವನ್ನು ಪಸರಿಸಿದರು. ಮನುಷ್ಯತ್ವದ ನಿಜವಾದ ಧಾರ್ಮಿಕತೆಯನ್ನು ಪ್ರತಿಪಾದಿಸುವ ಮೂಲಕ ಜನಸಾಮಾನ್ಯರಲ್ಲಿ ಸೌಹಾರ್ದತೆಯ ಜಾಗೃತಿ ಮೂಡಿಸಿ ಭಾವೈಕ್ಯತೆ ಬೆಳೆಸುವಲ್ಲಿ ಸೂಫಿ ಸಂತರ ಆಶಯಗಳು ಪ್ರಮುಖ ವಾಗಿದೆ. ಸೂಫಿ ಸಂತರು ತಳ ಸಮುದಾಯದ ಜನರಿಗೆ ಧಾರ್ಮಿಕ ಸ್ವಾತಂತ್ರ‍್ಯವನ್ನು ವಿಸ್ತರಿಸುವ ಮೂಲಕ ಕೋಮು ಸಾಮರಸ್ಯಕ್ಕೆ ಬಲವಾದ ಅಡಿಪಾಯ ಕಲ್ಪಿಸಿದರು ಎಂದು ತಿಳಿಸಿದರು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಜಾತ್ಯತೀತ ಆಶ್ರಯ ದಲ್ಲಿ ವರ್ಷಂಪ್ರತಿ ನಡೆಯುವ ಉರೂಸ್‌ಗಳು ಮನುಷ್ಯ ಪ್ರೀತಿಗೆ ಬಹುದೊಡ್ಡ ನಿದರ್ಶನವಾಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ. ಹನೀಫ್ ಮಾತನಾಡಿ, ಸೂಫಿ ಸಂತರು ಪ್ರತಿಪಾದಿಸಿದ ಮಾನವೀಯತೆಯ ತತ್ವಗಳು ಉರೂಸ್ ಆಚರಣೆಯ ಮೂಲಕ ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಪೆರುಂಬಾಡಿಯ ಶಂಸುಲ್ ಉಲಮ ಎಜುಕೇಶನ್ ಅಕಾಡೆಮಿಯ ಮುಖ್ಯಸ್ಥ ಸಿ.ಪಿ.ಎಂ. ಬಶೀರ್ ಹಾಜಿ ಮಾತನಾಡಿ, ಮತ ಸೌಹಾರ್ದತೆ ಮನುಷ್ಯ ಸ್ನೇಹ ಕ್ಕಿಂತಲೂ ದೊಡ್ಡದು. ಮತ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸಿ ಬಹುತ್ವದ ಧಾರ್ಮಿಕ ಸ್ವಾಯತ್ತತೆ ಯನ್ನು ಗಟ್ಟಿಗೊಳಿಸುವಲ್ಲಿ ಉರೂಸ್ ಗಳ ಪಾತ್ರ ಅಪಾರವಾದದ್ದು ಎಂದು ವ್ಯಾಖ್ಯಾನಿಸಿದರು. ಅಂಬಟ್ಟಿ ಜುಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಎ.ಹೆಚ್. ಶಾದುಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಪುರಸಭಾ ಸದಸ್ಯ ರಾಫಿ ಮೊದಲಾದವರು ಮಾತನಾಡಿ ದರು. ವೇದಿಕೆಯಲ್ಲಿ ಅಂಬಟ್ಟಿ ಜುಮಾ ಮಸೀದಿಯ ಖತೀಬ ರಫೀಕ್ ಸಹದಿ, ವೀರಾಜಪೇಟೆ ತಾಲೂಕು ಕೆಡಿಪಿ ಸದಸ್ಯ ಕೋಳುಮಂಡ ರಫೀಕ್, ಜಮಾಅತ್‌ನ ಮಾಜಿ ಅಧ್ಯಕ್ಷರಾದ ಕೆ.ಎ. ಯೂಸುಫ್, ಕೋಶಾಧಿಕಾರಿ ಖಾಲಿದ್ ಉಸ್ತಾದ್, ಹಿರಿಯರಾದ ಕೆ.ಎ. ಆಲಿ, ನಿವೃತ್ತ ಸೈನಿಕರಾದ ಎಂ.ಕೆ. ಮುಸ್ತಫಾ, ಪ್ರಮುಖರಾದ ಸನಾವುಲ್ಲಾ ಖಾನ್, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಪೆರುಂಬಾಡಿಯ ಎಸ್‌ಇಎ ವಿದ್ಯಾಸಂಸ್ಥೆಯ ವ್ಯವ ಸ್ಥಾಪಕ ಇಸ್ಮಾಯಿಲ್ ಮುಸ್ಲಿಯಾರ್ ನೇತೃತ್ವ ನೀಡಿದರು. ಕಿಕ್ಕರೆ ಶರೀಫ್ ಸ್ವಾಗತಿಸಿ ಕಾರ್ಯ ಕ್ರಮ ನಿರ್ವಹಿಸಿದರೆ ಆಡಳಿತ ಮಂಡಳಿ ಕಾರ್ಯದರ್ಶಿ ಶಾನು ವಂದಿಸಿದರು. ಜಿಲ್ಲೆಯ ಮತ್ತು ಹೊರ ಜಿಲ್ಲೆಯಿಂದ ಪಾಲ್ಗೊಂಡಿದ್ದ ಸಾವಿರಾರು ಸಂಖ್ಯೆಯ ಭಕ್ತ ಸಮೂಹಕ್ಕೆ ಸಾಮೂಹಿಕ ಅನ್ನಸಂತರ್ಪಣೆ ಮಾಡುವ ಮೂಲಕ ಈ ವರ್ಷದ ಅಂಬಟ್ಟಿ ಉರೂಸ್‌ಗೆ ತೆರೆ ಬಿತ್ತು.