ಸುಂಟಿಕೊಪ್ಪ, ಫೆ. ೧೨: ಅಪ್ರಾಪ್ತ ಮಕ್ಕಳು ವಾಹನ ಓಡಿಸುವುದು, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಅಧಿಕ ಮಂದಿ ಸವಾರಿ ಮಾಡುವುದು, ವಾಹನ ಚಾಲನಾ ಪರವಾನಗಿಯನ್ನು ಹೊಂದದೆ ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಮುಖ್ಯ ಪೇದೆ ಆಶಾ ಹೇಳಿದರು.

ಸುಂಟಿಕೊಪ್ಪ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾಹನ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಚಾಲಕರಿಗೆ ಪೊಲೀಸ್ ಇಲಾಖೆ ವತಿಯಿಂದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿದ ಆಶಾ ಮಾತನಾಡಿ, ವಾಹನಗಳನ್ನು ರಸ್ತೆಯಲ್ಲಿ ಚಾಲಿಸುವಾಗ ಚಾಲಕರು, ದ್ವಿಚಕ್ರ ಸವಾರರು ವಾಹನಗಳ ಚಾಲನೆ, ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.

ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುವಾಗ ಏಕಾಏಕಿ ದಾಟದೆ ೨ ಭಾಗಗಳಲ್ಲಿ ವಾಹನಗಳ ಸಂಚಾರ ಇಲ್ಲದಿರುವಾಗ ದಾಟಬೇಕೆಂದರು. ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಭವ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ಶಾಂತಗಿರಿ ಒಕ್ಕೂಟದ ಅಧ್ಯಕ್ಷೆ ಶುಭ, ಸೇವಾ ಪ್ರತಿನಿಧಿಗಳಾದ ಚಿತ್ರಾ, ನಂದಿನಿ ಹಾಗೂ ಪದಾಧಿಕಾರಿಗಳು ಇದ್ದರು.