ಮಡಿಕೇರಿ, ಫೆ. ೧೨: ಹೊದ್ದೂರು ಗ್ರಾಮದ ಐತಿಹಾಸಿಕ ಹಿನ್ನಲೆ ಹಾಗೂ ಪವಾಡ ಸದೃಶ ಮಹಿಮೆಯುಳ್ಳ ಶ್ರೀ ಶಾಸ್ತ-ಈಶ್ವರ ಕ್ಷೇತ್ರದಲ್ಲಿ ಶ್ರೀ ಶಾಸ್ತ-ಈಶ್ವರ, ಮಹಾಗಣಪತಿ, ಶ್ರೀ ಬೇಟೆ ಅಯ್ಯಪ್ಪ ಹಾಗೂ ಶ್ರೀ ವಿಷ್ಣುಮೂರ್ತಿ ದೇವತೆಗಳ ೪ನೇ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ತಾ. ೧೬ ರಿಂದ ೧೮ ರವರೆಗೆ ನಡೆಯಲಿದೆ.

ದೇವಾಲಯದಲ್ಲಿ ಮೂರು ದಿನಗಳ ಕಾಲ ಜಯರಾಜ್ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ತಾ. ೧೬ ರಂದು ಸಂಜೆ ೭ ಗಂಟೆಗೆ ಶ್ರೀ ಶಾಸ್ತ-ಈಶ್ವರ ದೇವಸ್ಥಾನದಲ್ಲಿ ಅಂದಿಬೊಳಕ್ ನಡೆಯಲಿದೆ. ತಾ. ೧೭ ರಂದು ಬೆಳಿಗ್ಗೆ ೭ ಗಂಟೆಗೆ ದೇವರ ತೂಚಂಬಲಿ, ೮ ಗಂಟೆಗೆ ಗಣಪತಿ ಹೋಮ, ೧೦ ಗಂಟೆಗೆ ಪ್ರತಿಷ್ಠಾ ಅಲಂಕಾರ ಪೂಜೆ, ೧೧.೩೦ಕ್ಕೆ ಶ್ರೀ ಬೇಟೆ ಅಯ್ಯಪ್ಪ ಸನ್ನಿಧಿಯಲ್ಲಿ ಅಭಿಷೇಕ, ೧೧.೪೫ಕ್ಕೆ ಶ್ರೀ ವಿಷ್ಣುಮೂರ್ತಿ ದೇವ ಸನ್ನಿಧಿಯಲ್ಲಿ ಅಭಿಷೇಕ ಪೂಜೆ ನಡೆಯಲಿದೆ.

ಮಧ್ಯಾಹ್ನ ೧೨ ಗಂಟೆಗೆ ಶ್ರೀ ಈಶ್ವರ ದೇವರ ನೆರ್‌ಪು ಬಲಿ, ಮಹಾಪೂಜೆ, ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದ್ದು, ೧ ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ.

ಸಂಜೆ ೪ ಗಂಟೆಗೆ ಕಾವೇರಿ ಹೊಳೆಯಲ್ಲಿ ದೇವರ ಜಳಕ, ಗ್ರಾಮದ ಮುಖ್ಯ ರಸ್ತೆಯಲ್ಲಿ ಚಂಡೆ ಮದ್ದಳೆಯೊಂದಿಗೆ ಮೆರವಣಿಗೆ, ಸಂಜೆ ೬.೩೦ರ ನಂತರ ದೇವಾಲಯದಲ್ಲಿ ವಿವಿಧ ನೃತ್ಯ (ತಡಂಬ್ ಆಟ್), ಸಂಪ್ರೋಕ್ಷಣೆ, ಅನ್ನದಾನ ನಡೆಯಲಿದೆ. ರಾತ್ರಿ ೯ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ತೋಯತ ತೆರೆ, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಲಿದೆ.

ತಾ. ೧೮ ರಂದು ಬೆಳಿಗ್ಗೆ ೮.೩೦ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದ್ದು, ಫೆ.೧೯ ರಂದು ಬೆಳಿಗ್ಗೆ ೧೦ ಗಂಟೆಗೆ ದೇವಾಲಯದಲ್ಲಿ ಶುದ್ಧಕಲಶ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಹಾಗೂ ಆಡಳಿತ ಮಂಡಳಿ ತಿಳಿಸಿದೆ.