ಮಡಿಕೇರಿ, ಫೆ. ೧೩: ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಕುಟುಂಬದ ಜನಸಂಖ್ಯೆಯು ಸುಮಾರು ೫೮,೭೬೫ ಇದ್ದು, ಇವರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷೆ ಜಿ.ಪಲ್ಲವಿ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ ೯,೦೬೬ ಅಲೆಮಾರಿ ಜನಸಂಖ್ಯೆ ಇದೆ. ಪರಿಶಿಷ್ಟ ವರ್ಗ ಅಲೆಮಾರಿ ೩೨,೭೦೨ ಜನಸಂಖ್ಯೆ ಇದೆ. ಹಾಗೆಯೇ ಆದಿವಾಸಿ ಬುಡಕಟ್ಟುಗಳಲ್ಲಿ ೧೬,೯೯೭ ಜನಸಂಖ್ಯೆ ಇದೆ ಎಂದು ವಿವರಿಸಿದರು.
ಕುಶಾಲನಗರ ತಾಲೂಕಿನ ಬಸವನಹಳ್ಳಿ ಬಳಿಯ ಜೇನುಕುರುಬ ಮತ್ತು ಮೇದಾ ಜನಾಂಗದ ಕುಟುಂಬಗಳು ವಾಸಿಸುತ್ತಿರುವ ಪುನರ್ ವಸತಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಕುಂದುಕೊರತೆ ಆಲಿಸಿದರು.
ಬಳಿಕ ದಿಡ್ಡಳ್ಳಿ ಆದಿವಾಸಿಗಳು ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ದೊಡ್ಡಬೆಟ್ಟಗೇರಿ ಯಲ್ಲಿ ಸೋಲಿಗ ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಿ ಅಲೆಮಾರಿ ಅಭಿವೃದ್ಧಿ ನಿಗಮದಿಂದ ನಡೆಸಲಾಗುತ್ತಿರುವ ಟೈಲರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಬಸವನಹಳ್ಳಿ ಬಳಿ ಬಿದಿರಿನ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಮಾಹಿತಿ ನೀಡಿ ಬಹಳ ಹಿಂದಿ ನಿಂದಲೂ ಬಿದಿರಿನ ಉತ್ಪನ್ನಗಳಿಂದ ಹಲವು ಕರಕುಶಲ ವಸ್ತುಗಳನ್ನು ತಯಾರಿಸಿಕೊಂಡು ಬದುಕು ಕಟ್ಟಿಕೊಳ್ಳಲಾಗುತ್ತಿದೆ. ಇದೊಂದು ವೃತ್ತಿಯಾಗಿದ್ದು, ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಇಲ್ಲಿನ ಕೆಲವರು ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವವರು ಇದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರು ಸರ್ಕಾರ ಮಹಿಳೆಯರ ಸ್ವಾವಲಂಬನೆಗೆ ಹಲವು ಕಾರ್ಯಕ್ರಮ ಜಾರಿಗೊಳಿಸಿದ್ದು, ಅವುಗಳನ್ನು ಪಡೆದುಕೊಳ್ಳುವಂತಾಗ ಬೇಕು. ಸರ್ಕಾರ ಅಲೆಮಾರಿ ಸಮುದಾಯಕ್ಕೆ ಆರ್ಥಿಕ ಬಲ ತುಂಬಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ೧ ಲಕ್ಷ ರೂ.ವರೆಗೆ ಸಾಲ ಯೋಜನೆ ನೀಡಲಿದ್ದು, ಶೇ.೫೦ ರಷ್ಟು ಸಹಾಯಧನ ಕಲ್ಪಿಸಲಾಗುತ್ತದೆ.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ೨ ಲಕ್ಷ ರೂ.ವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಜಿ.ಪಲ್ಲವಿ ವಿವರಿಸಿದರು.
ಸ್ವಾವಲಂಭಿ ಸಾರಥಿ ಯೋಜನೆ ಯಡಿ ಸರಕು ಸಾಗಾಣೆ ವಾಹನ, ಪ್ರವಾಸಿ ಟ್ಯಾಕ್ಸಿ ವಾಹನಗಳಿಗೆ ಶೇ.೭೫ ರಷ್ಟು ಮತ್ತು ಅದಕ್ಕಿಂತ ೪ ಲಕ್ಷ ರೂ.ವರೆಗೆ ಸಹಾಯಧನ ಕಲ್ಪಿಸಲಾಗುತ್ತದೆ.
ಅಲೆಮಾರಿ ಸಮುದಾಯದ ಮಹಿಳಾ ಸ್ವಸಹಾಯ ಸಂಘಗಳ ವಿವಿಧ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಮುಂದಾಗಲಾಗಿದ್ದು, ಈ ಯೋಜನೆಯಡಿ ಸ್ವಸಹಾಯ ಸಂಘಗಳ ವಿವಿಧ ಉದ್ದೇಶದ ಆರ್ಥಿಕ ಚಟುವಟಿಕೆಗೆ ಕನಿಷ್ಟ ೧೦ ಮಹಿಳಾ ಸದಸ್ಯರು ಇರುವ ಸ್ವಸಹಾಯ ಗುಂಪಿಗೆ ೨.೫೦ ಲಕ್ಷ ರೂ.ವರೆಗೆ ಸಾಲ ಸಹಾಯಧನ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಲೆಮಾರಿ ಸಮುದಾಯದವರು ಒಂದು ಕಡೆ ನೆಲೆಯೂರಿ ಜೀವನ ಸಾಗಿಸಲು ಹಾಗೂ ಭೂಮಾಲೀಕರ ನ್ನಾಗಿ ಮಾಡಲು ಮಹಿಳಾ ಕೃಷಿ ಕಾರ್ಮಿಕ ಅಲೆಮಾರಿ ಸಮುದಾಯ ದವರಿಗೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ಖರೀದಿಸಿ ಮಹಿಳಾ ಫಲಾನುಭವಿಗೆ ನೀಡಲಾಗುತ್ತಿದ್ದು, ಶೇ.೫೦ ರಷ್ಟು ಸಹಾಯಧನ ಕಲ್ಪಿಸಲಾಗುತ್ತದೆ.
ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೊಳವೆ ಬಾವಿ ಕೊರೆಸಿ ವಿದ್ಯುದ್ಧೀಕರಣ ಗೊಳಿಸುವ ಯೋಜನೆ ಈಗಾಗಲೇ ೬ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಆ ನಿಟ್ಟಿನಲ್ಲಿ ವಿವಿಧ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬನೆಯತ್ತ ಗಮನಹರಿಸಬೇಕು ಅವರು ತಿಳಿಸಿದರು.
ಬಸವನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭೂಮಿ ಇಲ್ಲದವರಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಸಾರ್ವಜನಿಕರು ಕೋರಿದರು. ಇಲ್ಲಿನ ಯುವಜನರು ರೆಸಾರ್ಟ್, ದಿನಗೂಲಿ ಕೆಲಸಕ್ಕೆ ತೆರಳುತಿದ್ದಾರೆ ಎಂದು ಅವಲತ್ತುಕೊಂಡರು.
ಅಲೆಮಾರಿ ಅಭಿವೃದ್ಧಿ ನಿಗಮದಿಂದ ದೊರೆಯುವ ಸಾಲ ಸೌಲಭ್ಯ, ಸಹಾಯಧನ ಮತ್ತಿತರ ಬಗ್ಗೆ ಅಲೆಮಾರಿ ಸಮುದಾಯಕ್ಕೆ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಪೊನ್ನಂಪೇಟೆ ತಾಲೂಕಿನ ಬೊಂಬುಕಾಡು ಕಾರೆಕಂಡಿ ಜೇನುಕುರುಬ ಹಾಡಿಗೆ ಭೇಟಿ ನೀಡಿ ಮಾಹಿತಿ ಪಡೆದರು. ವೀರಾಜಪೇಟೆ ತಾಲೂಕಿನ ಮಾಲ್ದಾರೆ ಆಸ್ತನಹಾಡಿ ಪರಿಶಿಷ್ಟ ಪಂಗಡದ ಕುರುಬ ಜನಾಂಗ ವಾಸಿಸುವ ಸ್ಥಳ ವೀಕ್ಷಿಸಿ ಮಾಹಿತಿ ಪಡೆದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಅವರು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಅಲೆಮಾರಿ ಅಭಿವೃದ್ಧಿ ನಿಗಮ ವತಿಯಿಂದ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ತಹಶೀಲ್ದಾರ್ಗಳಾದ ಕಿರಣ್ ಗೌರಯ್ಯ, ಮೋಹನ್ ಕುಮಾರ್, ಐಟಿಡಿಪಿ ಇಲಾಖೆ ಅಧಿಕಾರಿ ತೇಜಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಪ್ರೀತಿ ಚಿಕ್ಕಮಾದಯ್ಯ, ಸಿದ್ದೇಗೌಡ, ಎಇಇ ಮಹದೇವ, ಸೆಸ್ಕ್ ಎಇಇ ಸುರೇಶ್, ಕುಡಿಯುವ ನೀರು ವಿಭಾಗದ ಎಇಇ ಭಾಸ್ಕರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್. ಆನಂದ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು, ಇತರರು ಇದ್ದರು.