ಗೋಣಿಕೊಪ್ಪಲು, ಫೆ. ೧೩: ಕೊಡಗಿನಲ್ಲಿ ಕಾಡಾನೆ ಗಳ ಹಾವಳಿ ಮಿತಿಮೀರಿದ್ದು, ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಗೋಣಿ ಕೊಪ್ಪ-ಮೈಸೂರು ರಾಜ್ಯ ಹೆದ್ದಾರಿ ನಡುವಿನ ಚನ್ನಂಗೊಲ್ಲಿ ಯಲ್ಲಿ ನಡೆದ ಘಟನೆಯಲ್ಲಿ ಕಾರ್ಮಿಕ ಮಹಿಳೆ ಪ್ರಾಣ ಕಳೆದು ಕೊಂಡಿದ್ದಾರೆ.

ಚನ್ನಂಗೊಲ್ಲಿ ಪೈಸಾರಿ ನಿವಾಸಿ ಜಾನಕಿ (೫೨) ಮೃತ ದುರ್ದೈವಿ. ಗುರುವಾರ ಸಂಜೆ ಚನ್ನಂಗೊಲ್ಲಿ ಗ್ರಾಮದ ಮಾಣಿಕೊಪ್ಪ ಕಾಫಿ ತೋಟದಲ್ಲಿ ಕಾಫಿ ಕುಯ್ಯುವ ಕೆಲಸದಲ್ಲಿ ತೊಡಗಿಕೊಂಡಿದ್ದ ವೇಳೆ ಕಾಡಾನೆಯೊಂದು ಏಕಾಏಕಿ ಜಾನಕಿ ಮೇಲೆ ದಾಳಿ ನಡೆಸಿದೆ. ಕಾಡಾನೆ ಮಹಿಳೆಯ

ಮುಖಭಾಗಕ್ಕೆ ತುಳಿದ ಪರಿಣಾಮ ಮಹಿಳೆ ಜಾನಕಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಬಳಿಕ ಮಹಿಳೆಯ ಮೃತದೇಹವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಕ್ರಮವಹಿಸಲಾಯಿತು.

ಚನ್ನಂಗೊಲ್ಲಿ ಪೈಸಾರಿಯಲ್ಲಿ ಸಾವಿರಾರು ಮಂದಿ ನೆಲೆಸಿದ್ದು, ಆಗಿಂದಾಗ್ಗೆ ಕಾಡಾನೆ ಪೈಸಾರಿ ಸಮೀಪದ ತೋಟದಲ್ಲಿ ಕಾಣಿಸಿಕೊಂಡು ಸುತ್ತಮುತ್ತಲಿನ ಜನರನ್ನು ಭಯಭೀತಗೊಳಿಸುತ್ತಿದೆ. ಒಂಟಿ ಸಲಗವು ಈ ಭಾಗದಲ್ಲಿದ್ದು ಸಂಚರಿಸುತ್ತಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕ್ರಮಕ್ಕೆ ಪೊನ್ನಣ್ಣ ಸೂಚನೆ

ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸಮೀಪದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಶಾಸಕ ಪೊನ್ನಣ್ಣ, ಬೆಂಗಳೂರಿನ ಹಿರಿಯ ಅಧಿಕಾರಿಗಳೊಂದಿಗೂ ದೂರವಾಣಿ ಮೂಲಕ ಸಂಪರ್ಕಿಸಿ ಗಂಭೀರ ಸಮಸ್ಯೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.

ಒಂಟಿ ಸಲಗವನ್ನು ಕೂಡಲೇ ಸೆರೆಹಿಡಿಯಬೇಕು, ಸರ್ಕಾರದ ವತಿಯಿಂದ ೨೫ ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅವಳಡಿಸಲು ಹಣ ಬಿಡುಗಡೆಯಾಗಿದ್ದು, ಈ ಅನುದಾನವನ್ನು ಕೂಡಲೇ ಬಳಸಿಕೊಂಡು ತುರ್ತು ಕಾಮಗಾರಿ ನಡೆಸುವ ಮೂಲಕ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ನುಸುಳಿ ಬರುವುದನ್ನು ತಡೆ ಹಿಡಿಯಲು ಸ್ಥಳದಲ್ಲಿದ್ದ ಡಿಸಿಎಫ್ ಜಗನಾಥ್‌ಗೆ ಅವರಿಗೆ ಪೊನ್ನಣ್ಣ ಸೂಚನೆ ನೀಡಿದರು.

ಸಿಬ್ಬಂದಿಗಳ ನಿಯೋಜನೆ

ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ೫೬ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಆನೆ ಪತ್ತೆಗೆ ಮುಂದಾಗಲಾಗಿದೆ. ಕಾಡಾನೆಯು ಮದಬಂದಿರುವ ಕಾರಣ ಸ್ವಲ್ಪ ಎಚ್ಚರಿಕೆ ವಹಿಸಲಾಗುತ್ತಿದೆ. ಕೂಡಲೇ ಆನೆಯನ್ನು ಹಿಡಿದು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗುವುದು. ಮೃತರ ಕುಟುಂಬಕ್ಕೆ ಪರಿಹಾರ ವಿತರಿಸಲಾಗುವುದು ಎಂದು ಅರಣ್ಯಾಧಿಕಾರಿ ಜಗನ್ನಾಥ್ ತಿಳಿಸಿದರು.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಮಾಜಿ ಎಂ.ಎಲ್.ಸಿ. ಚೆಪ್ಪುಡಿರ ಅರುಣ್ ಮಾಚಯ್ಯ, ರಾಜ್ಯ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ತಿತಿಮತಿ ವಲಯ ಎಸಿಎಫ್ ಗೋಪಾಲ್, ಆರ್‌ಎಫ್.ಓ. ಗಂಗಾಧರ್, ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್, ಎಸ್.ಐ. ಪ್ರದೀಪ್‌ಕುಮಾರ್ ಇಲಾಖೆಯ ಇತರೆ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಮೃತರು ಪತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. -ಹೆಚ್.ಕೆ.ಜಗದೀಶ್