ಮಡಿಕೇರಿ, ಫೆ. ೧೩: ಸುದರ್ಶನ ವೃತ್ತದ ಬಳಿಯಿರುವ ಅಂಬೇಡ್ಕರ್ ಭವನದಲ್ಲಿ ಲೋಪ, ಭ್ರಷ್ಟಾಚಾರಗಳಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಿ ಹೋರಾಟ ಕೈಬಿಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ನಾಗರಾಜು ಬಣದ)ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುದರ್ಶನ ವೃತ್ತದ ಬಳಿಯ ಅಂಬೇಡ್ಕರ್ ಭವನ ಉತ್ತಮವಾಗಿ ನಿರ್ವಹಿಸಲ್ಪಡುತ್ತಿದೆ. ಹೀಗಿರುವಾಗ ಅದರ ವಿರುದ್ಧ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಅಲ್ಲಿ ಏನಾದರೂ ಭ್ರಷ್ಟಾಚಾರ ನಡೆಯುತ್ತಿದ್ದರೆ, ಲೋಪಗಳಿದ್ದರೆ ಈಗ ಹೋರಾಟಕ್ಕಿಳಿದಿರುವವರು ಜಿಲ್ಲಾಧಿಕಾರಿಗೆ ದೂರು ನೀಡಲಿ ಜಿಲ್ಲಾಧಿಕಾರಿ ತನಿಖೆ ನಡೆಸಿ ಲೋಪಗಳು ಕಂಡುಬAದರೆ ಕ್ರಮಕೈಗೊಳ್ಳುತ್ತಾರೆ ಎಂದು ನುಡಿದರು.

ದಸಂಸ (ಡಿ.ಜೆ.ಸಾಗರ್ ಬಣದ) ಜಿಲ್ಲಾ ಸಂಚಾಲಕ ಎಂ.ಎನ್. ರಾಜಪ್ಪ ಮಾತನಾಡಿ, ಅಂಬೇಡ್ಕರ್ ಭವನ ಸಮಿತಿ ನಮ್ಮ ಸಮಿತಿಯ ಕಾರ್ಯಕ್ರಮಕ್ಕೆ ಭವನವನ್ನು ಒದಗಿಸಿಕೊಟ್ಟಿದೆ. ಜಿಲ್ಲೆಯಲ್ಲಿ ಹಲವು ಅಂಬೇಡ್ಕರ್ ಭವನಗಳು ಸೂಕ್ತ ನಿರ್ವಹಣೆ ಇಲ್ಲದೆ ಮೂಲೆಗುಂಪಾಗಿವೆ. ಅಂತಹ ಭವನಗಳ ಅಭಿವೃದ್ಧಿಗಾಗಿ ಹೋರಾಟ ಮಾಡಲು ದಲಿತ ಸಂಘಟನೆಗಳು ಮುಂದಾಗಲಿ; ಅದನ್ನು ಬಿಟ್ಟು ಉತ್ತಮವಾಗಿ ನಿರ್ವಹಣೆ ಆಗುತ್ತಿರುವ ಅಂಬೇಡ್ಕರ್ ಭವನದ ವಿರುದ್ಧ ವೈಯಕ್ತಿಕ ದ್ವೇಷಕ್ಕಾಗಿ ಹೋರಾಟ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.

ಜಿಲ್ಲಾ ಸಂಘಟನಾ ಸಂಚಾಲಕ ಎನ್.ಆರ್. ದೇವರಾಜು ಮಾತನಾಡಿ, ಅಂಬೇಡ್ಕರ್ ಭವನ ಎಲ್ಲಾ ವರ್ಗದವರಿಗೂ ಉಪಯೋಗಕ್ಕೆ ಸಿಗುತ್ತಿದೆ. ಹೀಗಿರುವಾಗ ವೃಥಾ ಆರೋಪ ಮಾಡುವುದು; ಹೋರಾಟ ಮಾಡುವುದು ಸರಿಯಲ್ಲ. ಇಂತಹ ಹೋರಾಟಗಳನ್ನು ಕೈಬಿಟ್ಟು ದಲಿತರ, ಬಡವರ ನೈಜ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲಿ ಎಂದು ನುಡಿದರು.

ಗೋಷ್ಠಿಯಲ್ಲಿ ಸಮಿತಿಯ ಸಂಘಟನಾ ಸಂಚಾಲಕ ಎಸ್.ಜೆ. ರಾಜಪ್ಪ, ಖಜಾಂಚಿ ಹೆಚ್.ಆರ್. ವೀರಭದ್ರ, ಸದಸ್ಯ ಹೆಚ್.ಬಿ. ಗಿರೀಶ್ ಉಪಸ್ಥಿತರಿದ್ದರು.