ಮಡಿಕೇರಿ, ಫೆ. ೧೨: ಕಟ್ಟೆಮಾಡು ಶ್ರೀಮಹಾಮೃತ್ಯುಂಜಯ ಮಹದೇಶ್ವರ ದೇವಾಲಯಕ್ಕೆ ಪೂಜಾ ಸಂದರ್ಭ ಸಾಂಪ್ರದಾಯಿಕ ಉಡುಗೆ ಧರಿಸಿ ಪ್ರವೇಶಿಸಬಾರದು ಎಂಬ ದೇವಾಲಯದ ಬೈಲಾ ನಿರ್ಣಯಕ್ಕೆ ಇಂದು ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ದೊರೆತಿದೆ.
ಮಡಿಕೇರಿ ನಿವಾಸಿ ಚೊಟ್ಟೆಯಂಡ ಸಂಜು ಹಾಗೂ ವೀರಾಜಪೇಟೆಯ ಪಾಲೇಂಗಡ ಅಮಿತ್ ಭೀಮಯ್ಯ ಅವರು ವಕೀಲ ಕೆ.ಎಸ್. ಪೊನ್ನಪ್ಪ ಅವರ ಮೂಲಕ ಕೊಡಗು ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕರು, ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ಮಹಾದೇಶ್ವರ ದೇವಾಲಯ ಸಮಿತಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿ ನಿನ್ನೆ ದಿನ ರಿಟ್ ಅರ್ಜಿ ಸಲ್ಲಿಸಿದ್ದು, ಇಂದು ನ್ಯಾಯಾಧೀಶರಾದ ದೇವದಾಸ್ ಅವರ ಪೀಠದಲ್ಲಿ ವಿಚಾರಣೆ ನಡೆಯಿತು.
ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಕೆ.ಎನ್. ಪಣೀಂದ್ರ ಅವರು ದೇವಾಲಯ ಕುರಿತು ವಿವರಣೆ ನೀಡಿದರು. ಕಟ್ಟೆಮಾಡುವಿನ ಸರ್ವೆ ನಂಬರ್ ೨೭೬ರಲ್ಲಿರುವ ೩.೮ ಎಕರೆ ಜಾಗದಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ಕೆಲವು ಮಂದಿ ಸೇರಿ ಸೊಸೈಟಿ ಕಾಯಿದೆಯಡಿ ದೇವಾಲಯ ಆಡಳಿತ ನಡೆಸುವಂತೆ ತಾ. ೧೦.೧೦.೨೦೨೪ ರಂದು ಬೈಲಾ ನೋಂದಣಿ ಮಾಡಿಸಿರುವ ಬಗ್ಗೆ ಮಾಹಿತಿ ನೀಡಿದರು.
ದೇವಾಲಯದ ಬೈಲಾದಲ್ಲಿ ಯಾವುದೇ ವ್ಯಕ್ತಿ, ಆತನ ಸಾಂಪ್ರದಾಯಿಕ ಉಡುಗೆ ತೊಟ್ಟು ಬರಬಾರದೆಂದು ನಿಯಮಾವಳಿ ಮಾಡಿದ್ದು, ಕೊಡವ ಜನಾಂಗದವರಿಗೆ ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಬರಲು ಅಡ್ಡಿಪಡಿಸುತ್ತಿದ್ದಾರೆ ಎಂದರು.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ದೇವಾಲಯ ಉತ್ಸವ ಸಂದರ್ಭ ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದ ಕೊಡವರನ್ನು ದೇವಾಲಯಕ್ಕೆ ಪ್ರವೇಶಿಸದಂತೆ ತಡೆದ ಘಟನೆಯನ್ನು ವಿವರಿಸಿ ಈ ಕ್ರಮ ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಲ್ಲ ಎಂದು ವಾದಿಸಿದರು.
ವಾದ ಆಲಿಸಿದ ನ್ಯಾಯಾಧೀಶರಾದ ದೇವದಾಸ್ ಅವರು ೨ನೇ ಪ್ರತಿವಾದಿಯಾದ ದೇವಾಲಯ ಸಮಿತಿಯವರು ಯಾವುದೇ ವ್ಯಕ್ತಿ ಗೌರವಯುತವಾದ ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಲ್ಲಿ ದೇವಾಲಯ ಪ್ರವೇಶಿಸುವುದನ್ನು ತಡೆಯಬಾರದೆಂದು ಆದೇಶಿಸಿ ಮುಂದಿನ ವಿಚಾರಣೆ ದಿನಾಂಕವನ್ನು ತಾ. ೨೭ಕ್ಕೆ ಮುಂದೂಡಿದರು.
ಈ ಬಗ್ಗೆ ಪ್ರತಿವಾದಿಗಳಾದ ಸಹಕಾರ ಇಲಾಖೆ ಉಪನಿಬಂಧಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಬೇಕಾದ ನೋಟಿಸ್ ಅನ್ನು ಹೆಚ್ಚುವರಿ ಸರಕಾರಿ ವಕೀಲರು ಸ್ವೀಕರಿಸುವಂತೆಯೂ ೨ನೇ ಪ್ರತಿವಾದಿಯಾದ ದೇವಾಲಯ ಸಮಿತಿ ಅಧ್ಯಕ್ಷರಿಗೆ ತುರ್ತು ನೋಟಿಸ್ ನೀಡುವಂತೆ ಆದೇಶ ಪ್ರಕಟಿಸಿದರು.
(ಮೊದಲ ಪುಟದಿಂದ)
ಅರ್ಜಿಯಲ್ಲಿ ಏನಿತ್ತು?
ಅರ್ಜಿದಾರರ ಪರ ವಾದಿಸಿದ ವಕೀಲರು ಈ ಕೆಳಗಿನ ಅಂಶಗಳನ್ನು ಪರಿಗಣಿಸುವಂತೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ದೇವಾಲಯ ಆಡಳಿತ ಮಂಡಳಿ ಸಹಕಾರ ಇಲಾಖೆಯಲ್ಲಿ ಮಾಡಿರುವ ನೋಂದಣಿಯನ್ನು ರದ್ದುಪಡಿಸಬೇಕು, ಕೊಡವ ಮತ್ತು ಕೊಡವ ಭಾಷಿಕರು ಈ ದೇವಾಲಯಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ತೆರಳಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಈ ವಿಷಯವನ್ನು ಎಲ್ಲಾ ಪ್ರತಿವಾದಿಗಳ ಗಮನಕ್ಕೆ ತರಬೇಕು, ೨ನೇ ಪ್ರತಿವಾದಿಯಾದ ಕಟ್ಟೆಮಾಡು ಮೃತ್ಯುಂಜಯ ದೇವಾಲಯ ಸಮಿತಿಯವರು ದೇವಾಲಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಮಧ್ಯಂತರ ಆದೇಶ ನೀಡಬೇಕು. ಮುಂದಿನ ವಿಚಾರಣೆ ತಾ. ೨೭ರಂದು ನಡೆಯಲಿದೆ.