ಮಡಿಕೇರಿ, ಫೆ. ೧೩: ಪೊನ್ನಂಪೇಟೆ ಪದವಿಪೂರ್ವ ಕಾಲೇಜಿನ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ನೆರವೇರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ ಆಗಮಿಸಿದ್ದರು. ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಇಟ್ಟುಕೊಳ್ಳಬೇಕು. ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜವಾದರೂ ಅವುಗಳನ್ನು ಛಲದಿಂದ ಎದುರಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು. ಮೊಬೈಲನ್ನು ಹಿತಮಿತವಾಗಿ ಬಳಸಿ, ಸಮಾಜದ ಆದರ್ಶ ವ್ಯಕ್ತಿಗಳನ್ನು ಅನುಸರಿಸಿ, ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಸ್. ಕುಶಾಲಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಚ್ಚುತನ್, ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ, ಪ್ರಾಂಶುಪಾಲ ಆರ್. ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ಎಂ.ಬಿ. ಕಾವೇರಪ್ಪ ಹಾಗೂ ಕಾವೇರಮ್ಮ ವಸಂತ್ ತಲಾ ರೂ. ೧೦,೦೦೦ ಗಳ ದತ್ತಿ ನಿಧಿಯನ್ನು ಸ್ಥಾಪಿಸಿದರು. ವಿದ್ಯಾರ್ಥಿನಿ ಹೆಚ್.ಕೆ. ಕಾವ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಂ.ಸಿ. ವಸಂತ್ ಕುಮಾರ್ ಸ್ವಾಗತಿಸಿದರು. ಸಿ.ವಿ. ಲೋಕೇಶ್ ವಂದನಾರ್ಪಣೆ ಮಾಡಿದರು. ಗ್ರಂಥಪಾಲಕ ಸಿದ್ದಲಿಂಗಸ್ವಾಮಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಉಪನ್ಯಾಸಕರಾದ ಸಿ.ಡಿ. ಸಬಿತಾ, ಕೆ. ದೀಪಾ, ಆರ್. ಪಲ್ಲವಿ, ಜಿ.ಪಿ. ಪೂರ್ಣಿಮಾ, ಎಂ.ಜಿ. ಪ್ರಮಿ, ಸುಮಲತಾ, ಪವಿತ್ರ, ಧನುಶ್ರೀ ಉಪಸ್ಥಿತರಿದ್ದರು.

ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಾದ ಪಿ.ಎಂ. ಮೋನಿತ್ ಹಾಗೂ ಹೆಚ್.ಎಸ್. ಪಲ್ಲವಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಸಿ.ಎಸ್. ಸಿದ್ದಿಕ್ ಉತ್ತಮ ಕ್ರೀಡಾಪಟು ಪ್ರಶಸ್ತಿ ಗಳಿಸಿದರು.