ವೀರಾಜಪೇಟೆ, ಫೆ. ೧೩: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ವೀರಾಜಪೇಟೆ ಸನಿಹದ ಕೊಟ್ಟೋಳಿಯಲ್ಲಿ ನಡೆದಿದೆ. ಕರಡ ನಿವಾಸಿ ದಿ. ಕಟ್ಟಿ ಬಿದ್ದಪ್ಪ ಹಾಗೂ ಶೀಲಾ ದಂಪತಿ ಪುತ್ರಿ, ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎA. ದಿನೇಶ್ ಅವರ ಪತ್ನಿ ಕಾವೇರಮ್ಮ (೨೪) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಕೊಟ್ಟೋಳಿ ಗ್ರಾಮದ ದಿನೇಶ್ ಅವರನ್ನು ಕಾವೇರಮ್ಮ ೪ ವರ್ಷಗಳ ಹಿಂದೆ ವಿವಾಹವಾಗಿದ್ದು, ಕೆಲಕಾಲ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ನಂತರ ಊರಿಗೆ ಮರಳಿದ್ದರು. ಇತ್ತೀಚಿಗಷ್ಟೆ ಕಾವೇರಮ್ಮ ಅವರ ತಂದೆ ಕಟ್ಟಿ ಬಿದ್ದಪ್ಪ ಮೃತರಾಗಿದ್ದರು. ತಾ. ೧೨ ರಂದು ಕಟ್ಟಿ ಅವರ ಶ್ರಾದ್ಧವಿದ್ದ ಹಿನ್ನೆಲೆ ಕುಟುಂಬಸ್ಥರು ಪಿಂಡ ಪ್ರದಾನಕ್ಕಾಗಿ ಭಾಗಮಂಡಲಕ್ಕೆ ತೆರಳಿದ್ದರು. ಗಂಡನ ಮನೆಯಲ್ಲಿ ತನ್ನ ೧೪ ದಿನಗಳ ಮಗುವಿನೊಂದಿಗೆ ಇದ್ದ ಕಾವೇರಮ್ಮ ಸ್ನಾನದ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.

ಪತಿ ದಿನೇಶ್ ಮನೆಯ ಪಕ್ಕದ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡುವ ಸಂದರ್ಭ ಮಗು ಅಳುವ ಶಬ್ದ ಕೇಳಿ ಮನೆಗೆ ಬಂದಾಗ ಕಾವೇರಮ್ಮ ಇರಲಿಲ್ಲ. ಹುಡುಕಾಡಿದರೂ ಪತ್ತೆಯಾಗಲಿಲ್ಲ. ಸ್ನಾನದ ಗೃಹದ ಬಾಗಿಲು ಮುರಿದು ನೋಡಿದಾಗ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತಳ ಅಣ್ಣ ಎಂ.ಎ. ತಿಮ್ಮಯ್ಯ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಕಿಶೋರ್‌ಕುಮಾರ್ ಶೆಟ್ಟಿ