ಮಡಿಕೇರಿ, ಫೆ. ೧೩: ನಗರದ ಶ್ರೀ ಕೋದಂಡ ರಾಮ ದೇವಾಲಯ ಹಾಗೂ ಶ್ರೀ ಜ್ಯೋತಿ ಯುವಕ ಸಂಘದ ವತಿಯಿಂದ ದಸರಾ ದಶಮಂಟಪ ಸಮಿತಿಗಳ ನಡುವಿನ ಕ್ರಿಕೆಟ್ ಪಂದ್ಯಾಟ ಡಿಪಿಎಲ್ ಸೀಜ಼ನ್-೧ ತಾ.೧೫ ಮತ್ತು ೧೬ರಂದು ನಡೆಯಲಿದೆ ಎಂದು ಜ್ಯೋತಿ ಯುವಕ ಸಂಘದ ಉಪಾಧ್ಯಕ್ಷ ಹೆಚ್.ಎನ್. ಮಹೇಶ್ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದ್ದು, ಪೇಟೆ ರಾಮಮಂದಿರ, ಚೌಡೇಶ್ವರಿ ದೇವಾಲಯ, ದಂಡಿನ ಮಾರಿಯಮ್ಮ ದೇವಾಲಯದ ತಂಡಗಳನ್ನು ಹೊರತುಪಡಿಸಿ, ಕೋದಂಡರಾಮ ದೇವಾಲಯ, ದೇಚೂರು ರಾಮಮಂದಿರ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕರವಲೆ ಭಗವತಿ, ಕೋಟೆ ಮಾರಿಯಮ್ಮ, ಕಂಚಿಕಾಮಾಕ್ಷಿ, ಕೋಟೆ ಗಣಪತಿ ದೇವಾಲಯ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ನಾಲ್ಕು ಓವರ್‌ಗಳ ಪಂದ್ಯ ನಡೆಯಲಿದೆ. ತಾ.೧೫ರ ಬೆಳಿಗ್ಗೆ ೧೦.೩೦ ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಶಾಸಕ ಡಾ. ಮಂತರ್‌ಗೌಡ, ಎಸ್ಪಿ ಕೆ.ರಾಮರಾಜನ್, ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕೋದಂಡ ರಾಮ ದೇವಾಲಯದ ರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಹೇಶ್ ಮಾಹಿತಿಯಿತ್ತರು.
ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ವಿಜಯ್ ಮಾತನಾಡಿ, ಮಂಟಪ ಸಮಿತಿಯ ತಂಡಗಳಲ್ಲಿ ಮಡಿಕೇರಿ ತಾಲೂಕಿಗೆ ಒಳಪಟ್ಟ ೯+೨ ಆಟಗಾರರಿಗೆ ಆಡಲು ಅವಕಾಶವಿರುತ್ತದೆ. ಆಟಗಾರರ ಆಧಾರ್ ಕಾರ್ಡ್ಗಳನ್ನು ೨ ದಿನ ಮುಂಚಿತವಾಗಿ ಆಯೋಜಕರಿಗೆ ನೀಡಬೇಕು. ವಿಜೇತ ತಂಡಕ್ಕೆ ರೂ. ೫೦ ಸಾವಿರ ನಗದು, ಟ್ರೋಫಿ, ಎರಡನೇ ಸ್ಥಾನ ಪಡೆಯುವ ತಂಡಕ್ಕೆ ರೂ. ೨೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಸತತವಾಗಿ ಮೂರು ವರ್ಷ ಜಯಗಳಿಸುವ ತಂಡಕ್ಕೆ ರೋಲಿಂಗ್ ಟ್ರೋಫಿ ನೀಡಲಾಗುವುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹೆಚ್.ಎಂ. ವಿಶ್ವನಾಥ್, ಸಹಕಾರ್ಯದರ್ಶಿ ಹೆಚ್.ಜಿ. ಯತೀಶ್, ಕ್ರೀಡಾ ಸಮಿತಿ ಅಧ್ಯಕ್ಷ ಹೆಚ್.ಜಿ. ಯಶ್ವಂತ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಹೆಚ್.ಸಿ. ತೇಜಸ್ ಉಪಸ್ಥಿತರಿದ್ದರು.