ಶನಿವಾರಸಂತೆ, ಫೆ. ೧೨: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸುಗ್ರೀವಾಜ್ಞೆಗೂ ಮುಂದಾಗಿದೆ. ಈ ನಡುವೆ ಸಾಲದ ಸುಳಿಗೆ ಸಿಲುಕಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ.

ಇಲ್ಲಿನ ಗುಂಡೂರಾವ್ ಬಡಾವಣೆಯ ನಿವಾಸಿ, ಕಟ್ಟಡ ಕಾರ್ಮಿಕ ಖಾಸಿಂ ಅವರ ಪತ್ನಿ ಹಸೀನಾ (೪೨) ಮೃತ ದುರ್ದೈವಿ. ಆರ್ಥಿಕ ಸಮಸ್ಯೆಯಿಂದ ಹಸೀನಾ ೪ ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಸೇರಿದಂತೆ ಇತರರ ಹೆಸರಿನಲ್ಲಿ ಹಾಗೂ ಕೈಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅನಾರೋಗ್ಯಪೀಡಿತ ಅತ್ತೆಯ ಚಿಕಿತ್ಸೆಗೆಂದು ಹಾಗೂ ಬಡತನದ ಕಾರಣದಿಂದ ವಿಪರೀತ ಸಾಲವನ್ನು ಹಸೀನಾ ಮಾಡಿಕೊಂಡಿದ್ದರು. ಇದನ್ನು ತೀರಿಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಬುಧವಾರದಂದು ಸ್ನಾನದ ಮನೆಯಲ್ಲಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ವಾರಿಸುದಾರರಿಗೆ ಒಪ್ಪಿಸಲಾಯಿತು.

ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ನಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಇದಾಗಿದೆ.