ಗೋಣಿಕೊಪ್ಪಲು, ಫೆ. ೧೪: ದ.ಕೊಡಗಿನ ಪೊನ್ನಂಪೇಟೆ ಹಾಗೂ ಬಾಳೆಲೆ ಹೋಬಳಿಯ ಕೊಟ್ಟಗೇರಿ,ಕಾನೂರು,ಮಾಯಮುಡಿ ಹಾಗೂ ಬಾಳೆಲೆ ಸುತ್ತಮುತ್ತಲಿನ ಅಕ್ರಮ ಮರಳು ತೆಗೆಯುವ ಹೊಳೆ ಬದಿಯ ಪ್ರದೇಶಗಳಿಗೆ ಡಿವೈಎಸ್ಪಿ ಮಹೇಶ್ ಕುಮಾರ್ ಮುಂದಾಳತ್ವದಲ್ಲಿ ದಾಳಿ ನಡೆಸಲಾಯಿತು.

ಮುಂಜಾನೆಯಿAದಲೇ ದಾಳಿಗಿಳಿದ ಪೋಲಿಸರು ಅಕ್ರಮವಾಗಿ ಮರಳು ತೆಗೆಯುವ ಹೊಳೆ ಬದಿಗೆ ತೆರಳಿ ಮರಳು ತೆಗೆಯದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಹೊಳೆ ಕಡೆಗೆ ತೆರಳುವ ರಸ್ತೆಯಲ್ಲಿ ದೊಡ್ಡದಾದ ಕಂದಕ ನಿರ್ಮಾಣ ಮಾಡುವ ಮೂಲಕ ಯಾವುದೇ ವಾಹನಗಳು ಹೊಳೆಯ ಬದಿಗೆ ತೆರಳದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನ ಮೇರೆಗೆ ದಾಳಿ ಆರಂಭಿಸಿದ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಅವರೊಂದಿಗೆ ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುದೋಳ್, ಪೊನ್ನಂಪೇಟೆ ಎಸ್‌ಐ ನವೀನ್, ಗೋಣಿಕೊಪ್ಪ ಎಸ್‌ಐ ಪ್ರದೀಪ್ ಕುಮಾರ್ ಭಾಗವಹಿಸಿದ್ದರು.

ಕೆಲ ದಿನಗಳ ಹಿಂದೆ ಬಾಳೆಲೆ ಸಮೀಪದ ಕೈನಾಟಿ ಬಳಿ ಉದ್ಯಮಿಗೆ ಮರಳು ತುಂಬಿದ್ದ ಲಾರಿ ಅಪಘಾತ ಪಡಿಸಿದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸರು ಅಕ್ರಮ ಮರಳುಗಾರಿಕೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಬಾಳೆಲೆ ಸಮೀಪದ ಕೈನಾಟಿ ಬಳಿ ಅಪಘಾತ ಪಡಿಸಿದ ಮರಳು ಲಾರಿಯ ಮಾಲೀಕರ ವಿವರ ಪತ್ತೆಯಾಗಿದ್ದು, ಇವರ ಮೇಲೆಯೂ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಟಿಪ್ಪರ್ ಲಾರಿಗಳು ಅತೀ ವೇಗವಾಗಿ ಓಡಾಡುತ್ತಿವೆ ಇದರಿಂದ ಇತರೆ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡಲು ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಗ್ರಾಮದ ಜನತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.