ಸೋಮವಾರಪೇಟೆ, ಫೆ. ೧೪: ಮರ ಕಪಾತು ಮಾಡುವ ಕೆಲಸಕ್ಕೆಂದು ತಮಿಳುನಾಡಿನಿಂದ ಆಗಮಿಸಿದ್ದ ಕಾರ್ಮಿಕರೋರ್ವರು ಮರದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣ ಸಮೀಪದ ಕುಸುಬೂರು ಗ್ರಾಮದಲ್ಲಿ ನಿನ್ನೆ ದಿನ ನಡೆದಿದೆ.

ಕುಸುಬೂರು ಗ್ರಾಮದ ಕಾಫಿ ಬೆಳೆಗಾರ ಅರವಿಂದ್ ಅವರ ತೋಟಕ್ಕೆ ತಮಿಳುನಾಡಿನ ಸೇಲಂ ಸಮೀಪದ ಗ್ರಾಮವೊಂದರ ನಿವಾಸಿ ಪಳನಿಸ್ವಾಮಿ ಸೇರಿದಂತೆ ಇತರ ೧೦ ಮಂದಿ ಕಾರ್ಮಿಕರು ಕಳೆದ ಒಂದು ವಾರದ ಹಿಂದೆ ಆಗಮಿಸಿದ್ದರು. ತೋಟದ ಲೈನ್ ಮನೆಯಲ್ಲಿದ್ದುಕೊಂಡು ಮರ ಕಪಾತು ಕೆಲಸ ನಿರ್ವಹಿಸುತ್ತಿದ್ದರು.

ನಿನ್ನೆ ದಿನ ಮರ ಕಪಾತು ಮಾಡುವ ಸಂದರ್ಭ ಪಳನಿಸ್ವಾಮಿ(೫೫) ಅವರು ಆಕಸ್ಮಿಕವಾಗಿ ಆಯತಪ್ಪಿ ಮರದಿಂದ ಬಿದ್ದಿದ್ದು, ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಸಹ ಅಷ್ಟರಲ್ಲಾಗಲೇ ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದರು.

ಮೃತರ ಸಂಬAಧಿಕರು ತಮಿಳುನಾಡಿನಿಂದ ಆಗಮಿಸಬೇಕಾದ ಹಿನ್ನೆಲೆ ಮೃತದೇಹವನ್ನು ಮಡಿಕೇರಿಗೆ ಸಾಗಿಸಲಾಗಿತ್ತು. ಇಂದು ಮೃತರ ಸಂಬAಧಿಕರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಿ, ಸಂಜೆ ವೇಳೆಗೆ ಹಸ್ತಾಂತರ ಮಾಡಲಾಯಿತು.

ಮೃತ ಪಳನಿಸ್ವಾಮಿ ಅವರು ಪತ್ನಿ ಪಳನಿಯಮ್ಮ ಸೇರಿದಂತೆ ಓರ್ವ ಪುತ್ರಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಎ.ಎಸ್.ಐ. ಕೃಷ್ಣಯ್ಯ ಶೆಟ್ಟಿ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.