ಗೋಣಿಕೊಪ್ಪಲು, ಫೆ. ೧೪: ಕಾಡಾನೆ ದಾಳಿಯಿಂದ ಮೃತಪಟ್ಟ ಜಾನಕಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ಮೊದಲ ಕಂತಿನ ರೂ.೫ ಲಕ್ಷ ಪರಿಹಾರ ಚೆಕ್ ಅನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವಿತರಿಸಿದರು.

ಚೆನ್ನಂಗೊಲ್ಲಿ ಪೈಸಾರಿಗೆ ತೆರಳಿದ ಶಾಸಕ ಪೊನ್ನಣ್ಣ ಮನೆಯವರಿಗೆ ಸಾಂತ್ವನ ಹೇಳಿದರು.

ಆರಂಭಿಕ ಹಂತದಲ್ಲಿ ರೂ. ೫ ಲಕ್ಷ ಮೊತ್ತದ ಚೆಕ್ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ೨ನೇ ಕಂತಿನ ರೂ. ೧೦ ಲಕ್ಷ ಚೆಕ್ ನೀಡಲಾಗುತ್ತದೆ. ಅಲ್ಲದೇ ಪ್ರತಿ ತಿಂಗಳು ರೂ. ೪ ಸಾವಿರ ಪಿಂಚಣಿ ರೂಪದಲ್ಲಿ ಹಣ ನೀಡಲಾಗುತ್ತದೆ ಎಂದರು.

ಕಾಡಾನೆಗಳ ಉಪಟಳ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಮನೆಯಲ್ಲಿದ್ದವರು ಹಾಗೂ ಗ್ರಾಮಸ್ಥರು ಮನವಿ ಮಾಡಿದರು.

ಚೆಕ್ ವಿತರಣೆ ವೇಳೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಮಡಿಕೇರಿ ಸಿಸಿಎಫ್ ಮಾಲತಿ ಪ್ರಿಯ, ನಾಗರಹೊಳೆ ವನ್ಯಜೀವಿ ವಿಭಾಗದ ನಿರ್ದೇಶಕಿ ಸೀಮಾ, ವೀರಾಜಪೇಟೆ ಡಿಸಿಎಫ್ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ಆರ್‌ಎಫ್‌ಒ ಗಂಗಾಧರ್, ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.