ಸಿದ್ದಾಪುರ, ಫೆ. ೧೪: ಬ್ಯಾರಿಕೇಡ್‌ಗಳನ್ನು ಮುರಿದು ಕಾಫಿ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕೃಷಿ ಫಸಲು, ನಾಯಿಗೂಡನ್ನು ಹಾನಿಗೊಳಿಸಿರುವ ಘಟನೆ ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ಭಾಗದಲ್ಲಿ ನಡೆದಿದೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಕಾಡಂಚಿನ ಬಳಿ ಕಾಡಾನೆಗಳು ಕಾಫಿ ತೋಟಗಳಿಗೆ ಲಗ್ಗೆ ಇಡದಂತೆ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಕಾಡಾನೆಗಳು ರೈಲ್ವೆ ಬ್ಯಾರಿ ಕೇಡ್‌ಗಳನ್ನು ಮುರಿದು ಹಾಕಿ ಕಾಫಿ ತೋಟಗಳಿಗೆ ನುಗ್ಗಿವೆ. ಕರಡಿಗೋಡು ಗ್ರಾಮದ ಚಿಕ್ಕನಳ್ಳಿಯ ನಿವಾಸಿ ಜೋಜಿ ಥೋಮಸ್ ಎಂಬವರ ಕಾಫಿ ತೋಟದೊಳಗೆ ಕಾಡಾನೆಗಳು ರಾತ್ರಿ ನುಗ್ಗಿ ಕಾಫಿ ಗಿಡಗಳನ್ನು ನಾಶಗೊಳಿಸಿವೆ.
ಇದಲ್ಲದೆ ಮನೆ ಹಿಂಭಾಗದಲ್ಲಿದ್ದ ನಾಯಿ ಗೂಡುಗಳ ಮೇಲೆ ದಾಳಿ ನಡೆಸಿ ಹಾಳು ಮಾಡಿದೆ. ಈ ಬಗ್ಗೆ ತೋಟದ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಾಡಾನೆಗಳು ಮುರಿದು ಹಾಕಿದ್ದ ರೈಲ್ವೆ ಬ್ಯಾರಿ ಕೇಡ್‌ಗಳನ್ನು ದುರಸ್ತಿಪಡಿಸಿ ಅದೇ ಜಾಗದಲ್ಲಿ ಅಳವಡಿಸಿದರು. ಕೂಡಲೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.