ನಾಪೋಕ್ಲು, ಫೆ. ೧೮: ವಿದ್ಯಾರ್ಥಿಗಳೇ ಉತ್ತಮ ಸಮಾಜದ ಆಸ್ತಿ ಎಂದು ಹಾಕತ್ತೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವನಜ ಹೇಳಿದರು. ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸ್ವಸ್ಥ ಮತ್ತು ಸ್ವಾಸ್ಥö್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಈ ವಿಷಯದ ಕುರಿತಂತೆ ದುಶ್ಚಟ ದುರಭ್ಯಾಸದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಸಭಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸ್ವ ನಿಗ್ರಹದೊಂದಿಗೆ ಹತೋಟಿಗೆ ತಂದುಕೊಳ್ಳುವುದು ಅನಿವಾರ್ಯತೆ ಇದೆ ಎಂದ ಅವರು, ನಮ್ಮ ಶಾಲೆಯಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಲು ಅನುಮತಿಸಿದ ಸಂಸ್ಥೆಯನ್ನು ಅಭಿನಂದಿಸಿ, ನಮ್ಮ ಶಾಲೆಯ ಆವರಣ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ ಒಂದು ಲಕ್ಷ ರೂಪಾಯಿ ಮೊತ್ತದ ಅನುದಾನದ ಸೇವೆಯನ್ನು ನೆನಪಿಸಿ ಇದು ಶ್ಲಾಘನೀಯ ಎಂದರು.
ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಸಂಪನ್ಮೂಲ ವ್ಯಕ್ತಿಯಾಗಿ ನಂದಕುಮಾರ್ ಪಿ.ಪಿ. ಮಾತನಾಡಿ, ಇದುವರೆಗೆ ಕರ್ನಾಟಕ ರಾಜ್ಯದ ೧೯,೪೪೮ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ನಡೆಸಿ ೨೧ ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ಭಾರತ ದೇಶದಲ್ಲಿ ಒಂದು ವರ್ಷಕ್ಕೆ ೫ ಲಕ್ಷ ಜನರು ಮದ್ಯಪಾನದಿಂದ ಮರಣ ಹೊಂದಿದರೆ ೧೪.೫ ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯವಾಗಿದೆ.
ಆರೋಗ್ಯಪೂರ್ಣ ಸಮಾಜ ಅಥವಾ ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ಶಿಕ್ಷಕರಾದ ಮೀನಾ, ಜಯಂತಿ, ಒಕ್ಕೂಟದ ಅಧ್ಯಕ್ಷೆ ಪಾರ್ವತಿ, ಒಕ್ಕೂಟದ ಕಾರ್ಯದರ್ಶಿ ಹರಿಣಿ ಉಪಸ್ಥಿತರಿದ್ದರು. ಕವಿತಾ ಸ್ವಾಗತಿಸಿದ ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ವಿದ್ಯಾ ಬಿ.ಹೆಚ್. ಮತ್ತು ಸೇವಾ ಪ್ರತಿನಿಧಿ ಕವಿತಾ ಸಂಯೋಜಿಸಿ, ನಿರ್ವಹಿಸಿ, ಹರಿಣಿ ವಂದಿಸಿದರು.