(ರಫೀಕ್ ತೂಚಮಕೇರಿ)

ಪೊನ್ನಂಪೇಟೆ, ಫೆ. ೧೮: ಬೈಕ್ ಓಡಿಸುವುದು ಕೇವಲ ಪುರುಷರಿಗೆ ಮಾತ್ರ ಸಾಧ್ಯ ಎಂಬ ಕಾಲವೊಂದಿತ್ತು. ಆದರೆ ಇದೀಗ ಮಹಿಳೆಯರು ಕೂಡ ಬೈಕ್ ಓಡಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೊಡಗಿನಲ್ಲಿ ಮಹಿಳಾ ಬೈಕ್ ಸವಾರರ ಸಂಖ್ಯೆ ಹೆಚ್ಚತೊಡಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುರುವಂಡ ಸುಮಾ ಕುಟ್ಟಪ್ಪ ಇದೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಇವರು ದೇಶದ ಹಲವು ಭಾಗಗಳನ್ನು ಸದ್ದಿಲ್ಲದೆ ಬೈಕ್‌ನಲ್ಲೇ ಸುತ್ತಿ ಸವಾಲುಗಳನ್ನು ಜಯಿಸಿದ್ದಾರೆ. ಇತ್ತೀಚಿಗಷ್ಟೇ ಗುಜರಾತಿನ ರನ್ ಆಫ್ ಕಚ್ಚ್ನಲ್ಲಿ ಮುಕ್ತಾಯಗೊಂಡ ಇಂಡಿಯನ್ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಗಳ ಸಮಾಗಮವಾದ ರೈಡರ್ಸ್ ಮೇನಿಯಾ-೨೦೨೫ರಲ್ಲಿ ಪಾಲ್ಗೊಂಡು ಗಮನ ಸೆಳೆದಿರುವ ಸುಮಾ ಕುಟ್ಟಪ್ಪ, ರಾಜ್ಯದ ಮಹಿಳಾ ಸೋಲೋ ರೈಡರ್ಸ್ ಪಟ್ಟಿಯಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದಕ್ಷಿಣ ಕೊಡಗಿನ ಹಾತೂರು ಸಮೀಪದ ಕೊಳತ್ತೋಡು ಗ್ರಾಮದ ಕಾಫಿ ಬೆಳೆಗಾರರಾಗಿರುವ ಮುರುವಂಡ ಕುಟ್ಟಪ್ಪ ಅವರ ಪತ್ನಿಯಾಗಿರುವ ಸುಮಾ ಕುಟ್ಟಪ್ಪ ವೃತ್ತಿಯಲ್ಲಿ ಶಿಕ್ಷಕಿ. ಕಳೆದ ಹಲವು ವರ್ಷಗಳಿಂದ ಬೈಕನ್ನು ತಮ್ಮ ಪ್ರಯಾಣದ ಸಂಗಾತಿಯಾಗಿರಿಸಿಕೊAಡಿರುವ ಇವರು, ಗೋಣಿಕೊಪ್ಪಲಿನಲ್ಲಿ ಹಿಂದೆ ಶಿಕ್ಷಕಿಯಾಗಿದ್ದಾಗಲೂ ಪ್ರತಿ ದಿನ ತಮ್ಮ ಬೈಕಿನಲ್ಲೇ ಕರ್ತವ್ಯಕ್ಕೆ ತೆರಳುತ್ತಿದ್ದರು. ಮೈಸೂರಿನ ಬುಲ್ಸ್ ಆಫ್ ಮೈಸೂರು ಮೋಟರ್ ಸೈಕಲ್ ಕ್ಲಬ್ ಮತ್ತು ಕೊಡವ ರೈಡರ್ಸ್ ಕ್ಲಬ್‌ನ ಸಕ್ರಿಯ ಸದಸ್ಯರಾಗಿರುವ, ಪ್ರಸ್ತುತ ತಮಿಳುನಾಡಿನ ಕೊಯಮತ್ತೂರಿನಲ್ಲಿ ವೃತ್ತಿಯಲ್ಲಿರುವ ಸುಮಾ ಕುಟ್ಟಪ್ಪ, ಗುಜರಾತಿನÀ ಸೂರತ್‌ನಲ್ಲಿರುವ ಬುಲೆಟ್ ಬೆಟಾಲಿಯನ್ ಮೋಟರ್ ಸೈಕಲ್ ಕ್ಲಬ್ ಆಶ್ರಯದಲ್ಲಿ ರನ್ ಆಫ್ ಕಚ್‌ನಲ್ಲಿ ಆಯೋಜಿಸಲಾಗಿದ್ದ ರೈಡರ್ಸ್ ಮೇನಿಯಾ-೨೦೨೫ನಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಅವರು ಕೊಯಮುತ್ತೂರಿನಿಂದ ಕಚ್ಚ್ನವರೆಗೆ ಏಳು ದಿನಗಳ ಕಾಲ ಒಟ್ಟು ೨,೭೦೦ ಕಿ.ಮೀ.ಗೂ ಹೆಚ್ಚು ದೂರ ತಮ್ಮ ಬುಲೆಟ್ ಬೈಕ್ ನಲ್ಲಿ ಸವಾರಿ ಮಾಡಿದರು.

ರೈಡರ್ಸ್ ಮೇನಿಯಾ ಎಂಬುದು ಇಂಡಿಯನ್ ರಾಯಲ್ ಎನ್ಫೀಲ್ಡ್ ಬೈಕ್‌ಗಳ ಮಾಲೀಕರು ಒಂದೆಡೆ ಸಮಾಗಮಿಸುವ ವಾರ್ಷಿಕ ಕಾರ್ಯಕ್ರಮವಾಗಿರುತ್ತದೆ. ನೇಪಾಳ ಮತ್ತು ಭೂತಾನ್ ಸೇರಿದಂತೆ ದೇಶದಾದ್ಯಂತ ಇರುವ ಬುಲೆಟ್ ಬೈಕುಗಳ ವಿವಿಧ ಕ್ಲಬ್‌ನ ಸದಸ್ಯರು ಈ ಮೀನಿಯಾದಲ್ಲಿ ಭಾಗವಹಿಸುತ್ತಾರೆ. ಈ ವರ್ಷದ ಮೇನಿಯಾದಲ್ಲಿ ೪,೦೦೦ಕ್ಕೂ ಅಧಿಕ ಬುಲೆಟ್ ಬೈಕ್ ಮಾಲೀಕರು ಪಾಲ್ಗೊಂಡಿದ್ದರು ಎನ್ನಲಾಗಿದೆ. ೨೦೦೩ರಿಂದ ಆರಂಭಗೊAಡ ಈ ಕಾರ್ಯಕ್ರಮವು ಪ್ರತಿ ವರ್ಷ ವಿವಿಧ ರಾಜ್ಯಗಳಲ್ಲಿ ಎರಡು ದಿನಗಳ ಕಾಲ ಜರುಗುತ್ತದೆ. ಮೈಸೂರಿನ ಬುಲ್ಸ್ ಆಫ್ ಮೈಸೂರು ಮೋಟರ್ ಸೈಕಲ್ ಕ್ಲಬ್‌ನ ವತಿಯಿಂದ ರೈಡರ್ಸ್ ಮೇನಿಯಾಗೆ ತೆರಳಿದ ಒಟ್ಟು ೩೨ ಸದಸ್ಯರ ಪೈಕಿ ಮೂವರು ಮಹಿಳೆಯರಿದ್ದರು. ಈ ಪೈಕಿ ಕೊಡಗಿನ ಸುಮಾ ಕುಟ್ಟಪ್ಪ ಒಬ್ಬರಾಗಿದ್ದರು. ಇದಲ್ಲದೆ ಬೆಂಗಳೂರಿನಿAದ ಪಾಲ್ಗೊಂಡಿದ್ದ ತಂಡದಲ್ಲಿ ಕೊಡಗು ಮೂಲದ ನಾಲ್ವರು ರೈಡರ್ಸ್ ಗಳಿದ್ದರು.

ಕಚ್‌ನಲ್ಲಿರುವ ಬಿಳಿ ಉಪ್ಪಿನ ಮರುಭೂಮಿಯಲ್ಲಿ ನಡೆದ ರೈಡರ್ಸ್ ಮೇನಿಯಾ ವಿಶೇಷವಾದ ಅನುಭವ ಮೂಡಿಸಿತು. ಮಹಿಳಾ ರೈಡರ್ಸ್ಗಳಿಗಾಗಿ ನಡೆದ ಡರ್ಟ್ ಟ್ರ‍್ಯಾಕ್ ಸವಾರಿಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದು ಇನ್ನಷ್ಟು ಹೊಸತನವನ್ನು ಅನುಭವಿಸುವಂತಾಯ್ತು ಎಂದು ಪ್ರತಿಕ್ರಿಯಿಸಿರುವ ಸುಮಾ ಕುಟ್ಟಪ್ಪ, ಈ ಮೇನಿಯಾದಲ್ಲಿ ಸಾಕಷ್ಟು ಮಹಿಳಾ ರೈಡರ್ಸ್ಗಳು ಪಾಲ್ಗೊಂಡಿದ್ದರು. ಆದರೆ ೪೫ ವರ್ಷ ಪ್ರಾಯ ಮೇಲ್ಪಟ್ಟ ರೈಡರ್ ಆಗಿ ಇಡೀ ಮೇನಿಯಾದಲ್ಲಿ ನನ್ನನ್ನು ಗುರುತಿಸಿದ್ದು ಹೆಚ್ಚು ಸಂತಸವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಮೈಸೂರಿನಿಂದ ಹೊರಟು ೭ ದಿನದ ಪ್ರಯಾಣದಲ್ಲಿ ಗುಜರಾತಿನ ಕಚ್‌ಗೆ ತಲುಪಲಾಯಿತು. ಈ ಮಧ್ಯೆ ಪ್ರಸಿದ್ಧ ಯಾತ್ರಾಸ್ಥಳವಾದ ಸೋಮನಾಥ ದೇವಾಲಯ, ಎಲ್ಲೋರದ ಶ್ರೀ ಕೈಲಾಸ ದೇವಾಲಯ, ಗುಜರಾತಿನ ದ್ವಾರಕದಲ್ಲಿರುವ ದ್ವಾರಕಾಧೀಶ ದೇವಾಲಯಗಳಿಗೂ ಭೇಟಿ ನೀಡಲಾಯಿತು. ರೈಡರ್ಸ್ ಮೇನಿಯಾ ಸಂದರ್ಭದಲ್ಲಿ ಪಾಕಿಸ್ತಾನದ ಗಡಿಗೆ ಕೇವಲ ೫೦ ಮೀಟರ್ ದೂರದಲ್ಲಿರುವ ಕಚ್‌ನ ಮರುಭೂಮಿ ಪ್ರದೇಶದಲ್ಲಿ ಬೈಕಿನಲ್ಲಿ ಸುತ್ತಾಡಿದ್ದು ಮರೆಯಲಾಗದ ಘÀಳಿಗೆಯಾಗಿತ್ತು ಎಂದು ಸುಮಾ ಕುಟ್ಟಪ್ಪ ತಮ್ಮ ಅನುಭವವನ್ನು ಹಂಚಿಕೊAಡಿದ್ದಾರೆ. ಇವರ ಬೈಕ್ ಪ್ರೇಮಕ್ಕೆ ಮತ್ತು ದೀರ್ಘ ಬೈಕ್ ಪ್ರಯಾಣಕ್ಕೆ ಪತಿ ಕುಟ್ಟಪ್ಪ, ಮಕ್ಕಳ ಪೂರ್ಣ ಸಹಕಾರ ದೊರೆಯುತ್ತಿದೆ ಎಂದು ಸ್ಮರಿಸಿಕೊಳ್ಳಲು ಸುಮಾ ಕುಟ್ಟಪ್ಪ ಮರೆಯಲಿಲ್ಲ.