ಸೋಮವಾರಪೇಟೆ, ಫೆ. ೧೮: ಇಲ್ಲಿನ ಆಲೇಕಟ್ಟೆ ರಸ್ತೆಯ ಆರ್‌ಎಂಸಿ ಮುಂಭಾಗವಿರುವ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜೆ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ನೂರಾರು ಮಂದಿ ಭಕ್ತಾದಿಗಳ ಉಪಸ್ಥಿತಿಯನ್ನು ಶ್ರದ್ಧಾಭಕ್ತಿಯಿಂದ ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆಯಿಂದ ನವತ ಪ್ರಧಾನ ಕಲಾ ಕಲಾಪ್ರತಿಷ್ಠೆ, ವೆಂಕಟರಮಣ ಸ್ವಾಮಿ ಕಲಾತತ್ಪಾಧಿ ವಾಸ ಹೋಮ ನಡೆಯಿತು. ನಂತರ ಶಿಖರಕ್ಕೆ ಕಲಶಾಭಿಷೇಕ, ಸ್ವಾಮಿ ಕಲಶಾಭಿಷೇಕ ಹಾಗೂ ಮಹಾಪೂಜೆಯೊಂದಿಗೆ ಮಂಗಳಾರತಿ ನಡೆಯಿತು.

ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಪೂಜೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧೆಯಿಂದ ನಡೆಯಿತು. ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಶಾಸಕ ಡಾ. ಮಂತರ್ ಗೌಡ ಅವರು ದೇವಾಲಯಕ್ಕೆ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಪೂಜಾ ಕಾರ್ಯಗಳು ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆದವು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಿ.ಡಿ. ಗೋವಿಂದ, ಉಪಾಧ್ಯಕ್ಷ ಪೆರುಮಾಳ್, ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಹೆಚ್. ಮಂಜುನಾಥ್, ಸಹಕಾರ್ಯದರ್ಶಿ ಟಿ.ಎ. ಪ್ರಕಾಶ್ ಹಾಗೂ ಖಜಾಂಚಿ ಸಿ.ಯು. ಉದಯಕುಮಾರ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.