ಗೋಣಿಕೊಪ್ಪಲು, ಫೆ. ೨೦ : ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾಗಿ ಮೇರಿಯಂಡ ಸಂಕೇತ್ ಪೂವಯ್ಯ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅರಣ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭ನೇ ರಾಜ್ಯಮಟ್ಟದ ಸಭೆಯಲ್ಲಿ ಸಂಕೇತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ನೂತನ ಗೌರವ ಅಧ್ಯಕ್ಷರಾಗಿ ನೇಮಕಗೊಂಡ ಸಂಕೇತ್ ಪೂವಯ್ಯ ಮಾತನಾಡಿ ದಿನಗೂಲಿ ಗುತ್ತಿಗೆ ನೌಕರರು ಕಳೆದ ಹಲವು ದಶಕಗಳಿಂದ ತೀವ್ರವಾದ ಅನ್ಯಾಯವನ್ನು ಅನುಭವಿಸುತ್ತಿರುವುದು ಗಮನಿಸಿದ್ದೇನೆ.

ಕೆಲವು ಹಿರಿಯ ಅಧಿಕಾರಿಗಳು ಕೈಗೊಂಡ ಅವೈಜ್ಞಾನಿಕ ನಿರ್ಣಯ ಗಳಿಂದ ದಿನಗೂಲಿ ನೌಕರರು ಸಂಕಷ್ಟಕ್ಕೆ ಸಿಲುಕಿ ತಮ್ಮ ಕುಟುಂಬ ನಿರ್ವಹಣೆ ಮಾಡಲು ಪಡುತ್ತಿರುವ ಕಷ್ಟದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅರಣ್ಯ ಇಲಾಖೆ ಸೇರಿದಂತೆ ರಾಜ್ಯದ ವಿವಿಧ ಇಲಾಖೆಯ ದಿನಗೂಲಿ ನೌಕರರು ೨೦ ವರ್ಷ ಪೂರೈಸಿದ್ದರೂ ಇವರ ಕನಿಷ್ಟ ಬೇಡಿಕೆಗಳು ಇನ್ನೂ ಕೂಡ ಸರ್ಕಾರ ಮಟ್ಟದಲ್ಲಿ ಈಡೇರಿರುವುದಿಲ್ಲ.

ದಿನಗೂಲಿ ನೌಕರರು ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣನವರ ಗಮನಕ್ಕೆ ತರುವ ಮೂಲಕ ಸಮಸ್ಯೆಯ ಗಂಭೀರತೆಯನ್ನು ಚರ್ಚಿಸುತ್ತೇನೆ. ಆ ಮೂಲಕ, ಸಮಸ್ಯೆಗಳನ್ನು ಈಡೇರಿಸುವ ಸಲುವಾಗಿ ಮುಖ್ಯಮಂತ್ರಿಗಳಿಗೆ ದಿನಗೂಲಿ ನೌಕರರ ಬೇಡಿಕೆಗಳನ್ನು ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಪೊನ್ನಣ್ಣನವರ ಮುಖಾಂತರ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದಿನಗೂಲಿ ನೌಕರರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ ಅವರು, ಆ ನಿಟ್ಟಿನಲ್ಲಿ ದಶಕಗಳ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಸಭೆಗೆ ತಿಳಿಸಿದರು.

ರಾಜ್ಯಾಧ್ಯಕ್ಷ ಎ.ಎಂ. ನಾಗರಾಜ್ ಮಾತನಾಡಿ, ಕಳೆದ ೨೦ ವರ್ಷಗಳಿಂದ ದಿನಗೂಲಿ ನೌಕರರು ಪ್ರಾಮಾಣಿಕ ವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಸಿಗುವ ಸವಲತ್ತುಗಳು ಮರಿಚೀಕೆಯಾಗಿವೆ. ಅನೇಕ ಹೋರಾಟಗಳನ್ನು ಕೈಗೊಂಡರೂ ನ್ಯಾಯ ಪಡೆಯುವಲ್ಲಿ ವಿಫಲ ರಾಗಿದ್ದೇವೆ. ಇದೀಗ ಸಂಕೇತ್ ಪೂವಯ್ಯನವರ ಮುಂದಾಳತ್ವದಲ್ಲಿ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿರುವುದರಿಂದ ಇವರನ್ನು ಗೌರವ ಅಧ್ಯಕ್ಷರನ್ನಾಗಿ ಸರ್ವಾನುಮತ ದಿಂದ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿಗಳೊAದಿಗೆ ಉತ್ತಮ ಒಡನಾಟವಿರುವುದರಿಂದ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ರಾಜ್ಯ ಘಟಕದ ಪದಾಧಿಕಾರಿಗಳು ಸೇರಿದಂತೆ ಸಂಘದ ಸದಸ್ಯರು ಪಾಲ್ಗೊಂಡಿದ್ದರು.