ಶನಿವಾರಸಂತೆ, ಫೆ. ೨೦: ಪಟ್ಟಣದಿಂದ ೧೨ ಕಿ.ಮೀ. ದೂರದ ಮಾಲಂಬಿ ಬೆಟ್ಟದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಂiÀದಲ್ಲಿ ಶ್ರೀಮಳೆ ಮಲ್ಲೇಶ್ವರ ದೇವಾಲಯ ಸಮಿತಿ ವತಿಯಿಂದ ತಾ. ೨೬ ರಂದು ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕೊಡಗಿನ ಏಳು ಸಾವಿರ ಸೀಮೆಬೆಟ್ಟ ಸಾಲುಗಳಲ್ಲಿ ಈ ಬೆಟ್ಟ ೩ನೇ ಅತಿ ಎತ್ತರದ ಬೆಟ್ಟವಾಗಿದೆ.ಕೊಡಗಿನ ಬೆಡಗಿನ ಬೆಟ್ಟಗಳ ಸಾಲಿನಲ್ಲಿ ಬರುವ ಈ ಬೆಟ್ಟ ಐತಿಹಾಸಿಕ ಮಹತ್ವ ಹೊಂದಿದೆ. ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬಿಟ್ಟರೆ ಮಾಲಂಬಿ ಬೆಟ್ಟವೇ ಎರಡನೇ ಅತಿ ಎತ್ತರ ಬೆಟ್ಟ. ಹೀಗಾಗಿ ಈ ಬೆಟ್ಟ ಶಿವರಾತ್ರಿಗೆ ಮಾತ್ರವಲ್ಲ; ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವ ಪಡೆದಿದ್ದು, ಚಾರಣಿಗರಿಗೆ ಅತ್ಯಂತ ಪ್ರಿಯವಾಗಿದೆ. ಮಾಲಂಬಿ ಬೆಟ್ಟದ ಎತ್ತರ ೫,೪೯೪ ಅಡಿ. ಇದರ ತುದಿಗೆ ಹೋಗಿ ನಿಂತರೆ ಸುತ್ತಮುತ್ತಲಿನ ಸಿರಿ ಹಸಿರು ಕಣ್ಮನ ತಣಿಸುತ್ತದೆ. ಅಂಕುಡೊAಕಾಗಿ ಸೊಂಪಾಗಿ ಬೆಳೆದು ನಿಂತಿರುವ ಕಾಫಿ ತೋಟಗಳ ಐಸಿರಿ ಮನಸೆಳೆಯುತ್ತದೆ. ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಮಳೆಮಲ್ಲೇಶ್ವರನ ದೇವಾಲಯ ಬೆಟ್ಟಕ್ಕೆ ಕಿರೀಟವಿಟ್ಟಂತೆ ಕಾಣುತ್ತದೆ.
ಮಳೆಮಲ್ಲೇಶ್ವರನ ದೇವಾಲಯ ಹಳೆಯ ಕಾಲದ್ದು, ಬ್ರಿಟೀಷರ ಕಾಲದಿಂದಲೇ ಅಂದರೆ ೧೮೩೦ರಿಂದ ಮಾಲಂಬಿ ಬೆಟ್ಟದ ಮೇಲೆ ಮಳೆ ಮಲ್ಲೇಶ್ವರನಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ ವೀರಶೈವ ರಾಜರು ಕೊಡಗನ್ನು ಆಳಿದ ಕಾರಣ ಶಿವನ ಆರಾಧನೆಯೇ ಇಲ್ಲಿ ಆಧಿಕವಾಗಿದೆ, ಮಳೆ ಮಲ್ಲೇಶ್ವರ ಗುಡಿಯೂ ಇದರಲ್ಲಿ ಒಂದು.
ಮಳೆಮಲ್ಲೇಶ್ವರನ ಮಹಿಮೆ : ಹಿಂದೊಮ್ಮೆ ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿಕೊಂಡಾಗ ಹಾಸನ ಜಿಲ್ಲೆಯ ಆರಕಲಗೂಡಿನಿಂದ ಶಿವನು ಮಲ್ಲೇಶ್ವರಕ್ಕೆ ಬಂದು ನೆಲೆಸಿದ ಎಂಬುದು ಪುರಾಣ ಕಥೆ. ಆಗ ಮಳೆಯಾಗಿದ್ದರಿಂದ ಈ ದೇವರಿಗೆ ಮಳೆ ಮಲ್ಲೇಶ್ವರ ಎಂಬ ಹೆಸರು ಬಂದಿತೆAದು ಪ್ರತೀತಿ. ಪ್ರತಿವರ್ಷ ಮಹಾಶಿವರಾತ್ರಿಯಂದು ಇಲ್ಲಿ ವಿವಿಧ ಪೂಜೆಗಳು, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದಲೂ ೧೫ ಸಾವಿರಕ್ಕೂ ಅಧಿಕ ಭಕ್ತರು ಬಂದು ಮುಂಜಾನೆಯಿAದಲೇ ಬೆಟ್ಟವೇರುವುದು ವಿಶೇಷ. ಬೆಟ್ಟ ಇಳಿದು ಬರುತ್ತಿರುವಂತೆ ತುಂತುರು ಮಳೆ ಸುರಿಯುತ್ತದೆ. ೧೯೯೯ರಲ್ಲಿ ದಾನಿಗಳು ಹಾಗೂ ಕಾಫಿ ಬೆಳೆಗಾರರು ರೂ. ೧೦ ಲಕ್ಷ ವೆಚ್ಚದಲ್ಲಿ ಬೆಟ್ಟದ ತುದಿಯಲ್ಲಿನ ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದರು. ೨೦೦೬ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾಲಂಬಿಯ ಮಳೆಮಲ್ಲೇಶ್ವರ ಬೆಟ್ಟ ಸೇರಿಸಲಾಗಿದೆ. ೨೦೧೨-೧೩ ರ ಸಾಲಿನಲ್ಲಿ ಪ್ರವಾಸೋದÀ್ಯಮ ಇಲಾಖೆಯು ರೂ. ೬೫ ಲಕ್ಷ ವೆಚ್ಚದಲ್ಲಿ ಬೆಟ್ಟ ಅಭಿವೃದ್ಧಿಪಡಿಸಿದೆ. ಬೆಟ್ಟದ ಮಧ್ಯ ಭಾಗದ ಪ್ರಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸಭಾಂಗಣ ನಿರ್ಮಿಸಲಾಗಿದೆ. ಮೆಟ್ಟಲಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೆಟ್ಟವೇರಿ ಬರುವ ಭಕ್ತರಿಗೆ ಸಮಿತಿ ವತಿಯಿಂದ ನೆರಳಿಗಾಗಿ ಶೇಡ್ ನೆಟ್ ಅಳವಡಿಸಲಾಗಿದೆ. ಸಮಿತಿ ಪದಾಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿ ಸ್ವತಃ ಶ್ರಮದಾನ ಮಾಡುತ್ತಾರೆ.
ದೇವಾಲಯ ಸಮಿತಿ ವತಿಯಿಂದ ತಾ.೨೬ರ ಮಹಾಶಿವರಾತ್ರಿಯಂದು ದೇವಸ್ಥಾನದಲ್ಲಿ ಬೆಳಗ್ಗಿನ ಜಾವ ಸೂರ್ಯೋದಯವಾಗಿ ಸೂರ್ಯನ ಕಿರಣ ಶಿವಲಿಂಗದ ಮೇಲೆ ಬೀಳುತ್ತಿರುವ ಸಮಯದಲ್ಲಿ ಅರ್ಚಕ ಲಿಂಗರಾಜು ಹಾಲು-ತುಪ್ಪದ ಅಭಿಷೇಕ ಮಾಡುತ್ತಾರೆ. ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ನಂತರ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೨-೩೦ ಗಂಟೆಯವರೆಗೆ ಪೂಜೆ ನಡೆದು ಮಧ್ಯಾಹ್ನ ೧೨-೩೦ಕ್ಕೆ ಮಹಾ ಮಂಗಳಾರತಿಯಾಗಿ ತೀರ್ಥ ಪ್ರಸಾದ ವಿನಿಯೋಗವಾಗುತ್ತದೆ. ನಂತರ ಸಂಜೆ ೪ ಗಂಟೆಯವರೆಗೆ ಭಕ್ತಾದಿಗಳಿಗೆ ಹಣ್ಣುಕಾಯಿ ಮಾಡಿಕೊಡಲಾಗುವುದು. ಸಂಜೆಯವರೆಗೂ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಪದಾಧಿಕಾರಿಗಳಾದ ಹೆಚ್.ವಿ. ದಿವಾಕರ್, ಪುಟ್ಟರಾಜ್, ಹೆಚ್.ಕೆ. ಹಾಲಪ್ಪ, ವಿಠಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಶ.ಗ. ನಯನತಾರಾ, ಶನಿವಾರಸಂತೆ.