ಮಡಿಕೇರಿ, ಫೆ. ೨೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಜಿಲ್ಲಾ ಮಹಿಳಾ ಸಹಾಯವಾಣಿ ಇವರ ಸಹಯೋಗದೊಂದಿಗೆ ೨೦೨೪-೨೫ ನೇ ಸಾಲಿನ ಮಿಶನ್ ಶಕ್ತಿ ಯೋಜನೆಯಡಿ “ಬೇಟಿ ಬಚಾವೊ-ಬೇಟಿ ಪಡಾವೊ” ತಾಲೂಕು ಮಟ್ಟದ ಕಾರ್ಯಕ್ರಮ ಏರ್ಪಡಿಸಲಾಗಿದ್ದು “ಶಾಲಾ ಮಕ್ಕಳಿಗೆ ಪ್ರೇರಣಾ ತುಣುಕು ಕಾರ್ಯಾಗಾರವು ಹೆಬ್ಬಾಲೆ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆಯಿತು.
ಕುಶಾಲನಗರ ಗ್ರಾಮಾಂತರ ಠಾಣೆಯ ಎ.ಎಸ್.ಐ ಕುಮಾರಿ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಾಲಾ ಮಕ್ಕಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಸರ್ಕಾರ ಮಕ್ಕಳಿಗಾಗಿ ಉಚಿತ ಹಾಸ್ಟೆಲ್ ವ್ಯವಸ್ಥೆಗಳನ್ನು ಕಲ್ಪಿಸಿದ್ದು ಮಕ್ಕಳು ಶಿಕ್ಷಣವಂತರಾಗುವಲ್ಲಿ ಹೆಚ್ಚಿನದಾದ ಶ್ರಮ ವಹಿಸಬೇಕು. ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆಯಿಂದ ಇರಬೇಕಾಗುತ್ತದೆ. ಮಕ್ಕಳಿಗೆ ಸಾರ್ವಜನಿಕ ವಲಯದಲ್ಲಿ ಸಮಸ್ಯೆಗಳಾದ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಕ್ಕೆ ಕರೆ ಮಾಡಿ ಮಾಹಿತಿ ನೀಡಿದಾಗ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಪೊಲೀಸ್ ಇಲಾಖೆಯ ೧೧೨ ಗೆ ಕರೆಮಾಡಿ ಮಾಹಿತಿ ನೀಡಬಹುದು. ಯಾವುದೇ ರೀತಿಯಾದ ಭಯವಿಲ್ಲದೆ ಧೈರ್ಯದಿಂದ ಕರೆಮಾಡಬಹುದು ಎಂದು ತಿಳಿಸಿದರು. ಬಾಲ್ಯ ವಿವಾಹದ ಕುರಿತು ಮಾಹಿತಿಯನ್ನು ನೀಡಿದರು.
ನಂತರ ಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜು ಶೆಟ್ಟಿ ಅವರು ಮಾತನಾಡಿ ಮಕ್ಕಳು ತಂದೆ-ತಾಯಿ ಹಿರಿಯರಿಗೆ ಗೌರವ ನೀಡಬೇಕು. ಗುರುಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಈ ಕಾರ್ಯಕ್ರಮ ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಮಿಷನ್ ಸಂಯೋಜಕರಾದ ಮಮತ ಬಿ.ಎಸ್. ಅವರು ಮಾತನಾಡಿ, ಮಕ್ಕಳು ಗಂಡು ಹೆಣ್ಣು ಎಂಬ ಬೇಧವನ್ನು ಬೆಳೆಸಿಕೊಳ್ಳದೆ ಸಮಾನತೆಯ ಭಾವವನ್ನು ಬೆಳೆಸಿಕೊಳ್ಳಬೇಕು. ಲಿಂಗ ತಾರತಮ್ಯ ಮಾಡಬಾರದು ಎಂದು ತಿಳಿಸಿದರು. ನಂತರ ಮಕ್ಕಳಿಗೆ ಮಕ್ಕಳ ಸಹಾಯವಾಣಿ ಹಾಗೂ ಮಹಿಳಾ ಸಾಧಕಿಯರ ಪ್ರೇರಣಾ ತುಣುಕುಗಳನ್ನು ತೋರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪ್ಪೆಷಲಿಸ್ಟ್ ಕೇಶಿನಿ ಎಸ್.ಆರ್, ಕುಶಾಲನಗರ ಪೊಲೀಸ್ ಠಾಣೆಯ ಗುಣ, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.