ಗೋಣಿಕೊಪ್ಪಲು, ಮಾ.೨೧: ಆಡಳಿತ ಮಂಡಳಿಯವರು ಆಡಳಿತಾತ್ಮಕ ಲೋಪವೆಸಗಿರುವುದು ಸಾಭೀತಾಗಿರುವ ಹಿನ್ನೆಲೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ ೨೯(ಸಿ) ಸರ್ಕಾರದ ಅಧಿಸೂಚನೆಯ ದತ್ತವಾದ ಅಧಿಕಾರದಂತೆ ಮಡಿಕೇರಿ ಉಪ ವಿಭಾಗದ ಸಹಾಯಕ ನಿಬಂಧಕಿ ಶೈಲಜಾ ಈ ಆದೇಶವನ್ನು ೧೮.೦೩.೨೦೨೫ರಂದು ಹೊರಡಿಸಿದ್ದು, ಸಂಘದ ಸದಸ್ಯರು ಸಂಘದ ಇತರ ಯಾವುದೇ ಸಹಕಾರ ಸಂಘದ ಸಮಿತಿಯ ಸದಸ್ಯರಾಗಿ ಈ ಆದೇಶದ ದಿನಾಂಕದಿAದ ಮುಂದಿನ ೫ ವರ್ಷದ ಅವಧಿಗೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅಥವಾ ನೇಮಕವಾಗುವುದಕ್ಕೆ ಅನರ್ಹರಾಗಿರುತ್ತಾರೆಂದು ಆದೇಶದಲ್ಲಿ ತಿಳಿಸಿದ್ದಾರೆ.
ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಡಳಿತ ಮಂಡಳಿಯು ಕರ್ತವ್ಯಲೋಪವೆಸಗಿದೆ. ನಿವೃತ್ತಿಯಾಗಿದ್ದ ಅಧಿಕಾರಿಯನ್ನು ಮತ್ತೆ ಅದೇ ಅಧಿಕಾರದಲ್ಲಿ ಮುಂದುವರೆಸಿ ಕಾನೂನು ಬಾಹಿರವಾಗಿ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಅಲ್ಲದೆ ಇವರಿಗೆ ಅದೇ ವೇತನವನ್ನು ಮುಂದುವರೆಸುತ್ತಿದ್ದಾರೆ. ಇದರಿಂದ ಸಂಘಕ್ಕೆ ನಷ್ಟ ಸಂಭವಿಸಿದೆ. ಮತ್ತೊಬ್ಬರಿಗೆ ಉದ್ಯೋಗ ಅವಕಾಶದಿಂದ ವಂಚಿತರಾಗುವAತೆ ಮಾಡಿದ್ದಾರೆ ಎಂದು ಸಂಘದ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೆನ್ನಯ್ಯನಕೋಟೆಯ ಹೆಚ್.ಪಿ. ಗಣೇಶ್ ಸಹಕಾರ ಸಂಘಗಳ ನಿಬಂಧಕರಿಗೆ ೨೩.೧೨.೨೦೨೪ರಂದು ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಸಹಕಾರ ಸಂಘದ ನಿಬಂಧಕರು ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಅಗತ್ಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದರು.
ದೂರುದಾರರು ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡ ಉಪನಿಬಂಧಕರು ಮೇಲ್ನೊಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಮ್ಮ ಅಧಿಕಾರವನ್ನು ಬಳಸಿ ಆಡಳಿತ ಮಂಡಳಿಯ ಸದಸ್ಯರನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ. ಇದರಿಂದ ಆಡಳಿತ ಮಂಡಳಿಯ ಸದಸ್ಯರು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವಂತಾಗಿದೆ.ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘವು ಕೊಡಗಿನ ಪ್ರತಿಷ್ಠಿತ ಸಹಕಾರ ಸಂಘಗಳಲ್ಲೊAದಾಗಿದ್ದು ೧೦೦ ವರ್ಷಗಳನ್ನು ಕಳೆದಿದೆ. ಅಲ್ಲದೆ ರಾಜ್ಯ ಹಾಗೂ ರಾಷ್ಟç ಪ್ರಶಸ್ತಿಯನ್ನು ಪಡೆಯುವ ಮೂಲಕ ಹೆಸರು ಗಳಿಸಿತ್ತು. ಸುತ್ತಮುತ್ತಲಿನ ಗ್ರಾಮದ ಜನತೆಗೆ ಈ ಸಹಕಾರ ಸಂಘವು ಅತ್ಯಂತ ಪ್ರಯೋಜನಕಾರಿಯಾಗಿತ್ತು. ಇದೀಗ ಆಡಳಿತ ಮಂಡಳಿಯ ವಜಾದ ಹಿನ್ನೆಲೆಯಲ್ಲಿ ಸಹಕಾರ ಸಂಘಕ್ಕೆ ವಿಶೇಷ ಅಧಿಕಾರಿಗಳನ್ನು ನೇಮಕಗೊಳಿಸುವ ಪ್ರಕ್ರಿಯೆ ಆರಂಭಗೊAಡಿದೆ.
-ಹೆಚ್.ಕೆ. ಜಗದೀಶ್