ಸೋಮವಾರಪೇಟೆ,ಮಾ.೨೧: ಕಾಲೇಜು ಬಿಡುವ ಸಂದರ್ಭ ಬೈಕ್‌ನಲ್ಲಿ ‘ರೋಡ್ ರೋಮಿಯೋ’ಗಳಂತೆ ಓಡಾಡಿಕೊಂಡು ಹೆಣ್ಣುಮಕ್ಕಳನ್ನು ಚುಡಾಯಿಸುವ ಯುವಕರಿಗೆ ಸೋಮವಾರಪೇಟೆ ಪೊಲೀಸರು ಭಾರೀ ದಂಡ ವಿಧಿಸುವ ಮೂಲಕ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ.

ಶಾಲಾ ಕಾಲೇಜು ಆರಂಭವಾಗುವ ಮತ್ತು ಬಿಡುವ ಸಂದರ್ಭ ಅಡ್ಡಾದಿಡ್ಡಿ ಬೈಕ್ ಓಡಿಸುವುದು, ತ್ರಿಬಲ್ ರೈಡಿಂಗ್, ಸೈಲೆನ್ಸರ್‌ನಿಂದ ಕರ್ಕಶ ಶಬ್ದ ಹೊರಹಾಕುವುದು, ಹೆಲ್ಮೆಟ್ ಧರಿಸದೇ ಅತ್ತಿಂದಿತ್ತ, ಇತ್ತಿಂದಿತ್ತ ಅಡ್ಡಾಡುವ ಯುವಕರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತಗೊಂಡಿದ್ದು, ಈ ಬಗ್ಗೆ ಹಲವು ಸಭೆಗಳಲ್ಲಿಯೂ ಪ್ರಸ್ತಾಪವಾಗಿತ್ತು. ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿಯೂ ಪೊಲೀಸ್ ಇಲಾಖೆಯನ್ನು ಜನಪ್ರತಿನಿಧಿಗಳು ಒತ್ತಾಯಿಸಿದ್ದರು.

ಸೋಮವಾರಪೇಟೆ ಪೊಲೀಸರು ಇಂತಹ ಪುಂಡರ ಮೇಲೆ ನಿಗಾ ವಹಿಸುತ್ತಿದ್ದು, ನಿನ್ನೆ ದಿನ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಾ, ಹುಡುಗಿಯರನ್ನು ಚುಡಾಯಿಸುತ್ತಿದ್ದ ಮಾಹಿತಿಯ ಮೇರೆ, ಕಾರ್ಯಾಚರಣೆಗೆ ಇಳಿದ ಪೊಲೀಸರು ೧೯ ವರ್ಷದ ಯುವಕ ಚಾಲಿಸುತ್ತಿದ್ದ ಬೈಕ್ ಹಿಡಿದು, ಬರೋಬ್ಬರಿ ೧೮,೫೦೦ ರೂಪಾಯಿ ದಂಡ ವಿಧಿಸಿದ್ದಾರೆ. ಆ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಪೋಲಿತನ ತೋರುವ ಪುಂಡರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ನಿನ್ನೆ ದಿನ ಜೂನಿಯರ್ ಕಾಲೇಜು ಹಾಗೂ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಾ, ಅಜಾಗರೂಕತೆಯ ಚಾಲನೆಯೊಂದಿಗೆ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೈಕ್ ಓಡಿಸುತ್ತಿದ್ದ ಯುವಕನನ್ನು ಬೆನ್ನಟ್ಟಿದ ಪೊಲೀಸರು, ವಶಕ್ಕೆ ಪಡೆದು ತಪಾಸಣೆ ನಡೆಸಿದ ಸಂದರ್ಭ ಬೈಕ್‌ಗೆ ಅಗತ್ಯ ದಾಖಲೆಗಳೂ ಇಲ್ಲದಿರುವುದು ಕಂಡುಬAದಿದೆ.

ಕಾಲೇಜು ಬಿಡುವ ಸಂದರ್ಭ ವೀಲಿಂಗ್ ಮಾಡುತ್ತಾ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಾ ಸಾಗುವ ಬಗ್ಗೆ ಪೊಲೀಸರಿಗೆ ದೂರುಗಳು ಸಲ್ಲಿಕೆಯಾಗಿದ್ದು, ನಿನ್ನೆಯೂ ಸಹ ಇಂತಹದೇ ಕೃತ್ಯ ಎಸಗಿದ ಸಂದರ್ಭ ರಸ್ತೆಗಿಳಿದ ಪೊಲೀಸರು, ಸಂಚಾರಿ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ ಯುವಕನಿಗೆ ಒಟ್ಟಾರೆಯಾಗಿ ೧೮,೫೦೦ ರೂಪಾಯಿ ದಂಡ ವಿಧಿಸಿದ್ದಾರೆ.

ಸೈಲೆನ್ಸರ್ ಮಾಡಿಫೈ ಮಾಡಿರುವುದಕ್ಕೆ ೫೦೦, ಅಸಮರ್ಪಕ ನಂಬರ್ ಪ್ಲೇಟ್‌ಗಾಗಿ ರೂ. ೫೦೦, ಚಾಲನಾ ಪರವಾನಗಿ ಇಲ್ಲದಿರುವುದಕ್ಕೆ ೧೦೦೦, ಅಪಾಯಕಾರಿ ಚಾಲನೆಗಾಗಿ ೧೦೦೦, ಸಂಚಾರಿ ನಿಯಮ ಉಲ್ಲಂಘನೆಗಾಗಿ ೫೦೦, ಪೊಲೀಸ್ ಸಿಗ್ನಲ್ ನೀಡಿದ ಸಂದರ್ಭ ನಿಲ್ಲಿಸದೇ ತೆರಳಿದಕ್ಕಾಗಿ ೫೦೦, ರೇಸಿಂಗ್‌ನAತೆ ಅತೀ ವೇಗದ ಚಾಲನೆಗಾಗಿ ೫೦೦೦, ಸುಳ್ಳು ಮಾಹಿತಿ ನೀಡಿದಕ್ಕಾಗಿ ೧೦೦೦, ಫ್ರೀ ವೀಲಿಂಗ್ ಮಾಡಿದಕ್ಕಾಗಿ ೫೦೦೦, ವಾಹನ ವಿಮೆ ಇಲ್ಲದೇ ಇರುವುದಕ್ಕೆ ೧೦೦೦, ಮೊಬೈಲ್ ಫೋನ್ ಬಳಕೆಗಾಗಿ ೧೫೦೦, ದಾಖಲಾತಿಗಳನ್ನು ಸಲ್ಲಿಸದೇ ಇರುವುದಕ್ಕೆ ೫೦೦, ಹೆಲ್ಮೆಟ್ ಧರಿಸದೇ ಇರುವುದಕ್ಕೆ ೫೦೦ ರೂಪಾಯಿ ಸೇರಿದಂತೆ ಒಟ್ಟು ೧೮,೫೦೦ ರೂಪಾಯಿ ದಂಡ ವಿಧಿಸಲಾಗಿದೆ.

ಮೊನ್ನೆಯಷ್ಟೇ ಅಪ್ರಾಪ್ತ ಬಾಲಕನೋರ್ವ ಬೈಕ್ ಚಾಲನೆ ಮಾಡುವ ಸಂದರ್ಭ ಪೊಲೀಸರಿಗೆ ಸಿಕ್ಕಿಬಿದ್ದು, ಪೊಲೀಸರು ನ್ಯಾಯಾಲಯಕ್ಕೆ ಪ್ರಕರಣ ಸಲ್ಲಿಸಿದ ನಂತರ, ನ್ಯಾಯಾಧೀಶರು ಬಾಲಕನ ಪೋಷಕರಿಗೆ ರೂ. ೨೦ ಸಾವಿರ ದಂಡ ವಿಧಿಸಿದ್ದರು. ಇದೀಗ ವೀಲಿಂಗ್ ಮಾಡುತ್ತಿದ್ದ ಯುವಕನಿಗೆ ಪೊಲೀಸರು ರೂ. ೧೮,೫೦೦ ರೂಪಾಯಿ ದಂಡ ವಿಧಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.