ಮಡಿಕೇರಿ, ಮಾ. ೨೧: ಇತ್ತೀಚೆಗೆ ಹೊದ್ದೂರಿನಲ್ಲಿ ರೈತ ಸಂಘದಿAದ ನಡೆದ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿರುವ ಬಹುಜನ ಕಾರ್ಮಿಕ ಸಂಘ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೊಣ್ಣಪ್ಪ, ಹೊದ್ದೂರು ಭಾಗದಲ್ಲಿ ನಿವೇಶನ ರಹಿತರು ಶೆಡ್ ನಿರ್ಮಿಸಿಕೊಂಡಿರುವುದು ಸರಕಾರದ ಜಾಗದಲ್ಲಿ ಹೊರತು ಭೂ ಮಾಲೀಕರ ಜಾಗದಲ್ಲಿ ಅಲ್ಲ. ನಿವೇಶನ ರಹಿತರ ಪಟ್ಟಿಯನ್ನು ಸರಕಾರ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ನೀಡಿ ಗಮನ ಸೆಳೆಯುವ ಕೆಲಸ ಮಾಡಲಾಗಿದೆ.
ಆದರೆ, ಇದೀಗ ರೈತರ ಹೆಸರಲ್ಲಿ ಮುಖವಾಡ ಧರಿಸಿರುವ ಭೂ ಮಾಲೀಕರು ಸರಕಾರಿ ಜಾಗವನ್ನು ಅದರಲ್ಲಿರುವ ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಸಂಚು ರೂಪಿಸಿ ನಿಷ್ಠಾವಂತರ ರೈತರನ್ನು ದಿಕ್ಕುತಪ್ಪಿಸಿ ಹೋರಾಟ ಮಾಡಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಚು ಕೂಡ ಇಲ್ಲಿ ನಡೆದಿದೆ ಎಂದು ಆರೋಪಿಸಿದರು.
ಮಾಜಿ ಜನಪ್ರತಿನಿಧಿಯೊಬ್ಬರು ಸಭೆಯಲ್ಲಿ ಭಾಗವಹಿಸಿ ಪ್ರಚೋದನಾತ್ಮಕ ಮಾತುಗಳನ್ನಾಡಿದ್ದಾರೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು. ನಿಯಮಕ್ಕಿಂತ ಹೆಚ್ಚು ಜಾಗವನ್ನು ಕಬಳಿಸಿರುವ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಅಂತವರಿಗೆ ಭೂಗುತ್ತಿಗೆಯಡಿ ಜಾಗ ನೀಡಬಾರದು ಎಂದು ಒತ್ತಾಯಿಸಿದರು.
ಅಭಿವೃದ್ಧಿ ಪರವಾಗಿರುವ ಹೊದ್ದೂರು ಗ್ರಾ.ಪಂ. ಅಧಿಕಾರಿಗಳ ಬಗ್ಗೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಕಿರಣ್ ಜಗದೀಶ್, ಮಹಿಳಾ ಘಟಕ ಅಧ್ಯಕ್ಷೆ ಪಿ.ಎ. ಕುಸುಮಾವತಿ, ಪದಾಧಿಕಾರಿಗಳಾದ ಹನೀಫ್, ಸತೀಶ್, ಉಮೇಶ್ ಹಾಜರಿದ್ದರು.