ಸೋಮವಾರಪೇಟೆ, ಮಾ. ೨೧: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದ್ದು, ಇಂತಹ ಶಾಲೆಗಳ ಉಳಿವಿಗೆ ಪೋಷಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಅಭಿಪ್ರಾಯಿಸಿದರು.
ಸಮೀಪದ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯ ದಾನಿಗಳು ವಿವಿಧ ಕೊಡುಗೆಗಳನ್ನು ನೀಡುವ ಮೂಲಕ ಶಾಲೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಅನೇಕ ಮಂದಿ ಇಂದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಸರ್ಕಾರವು ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಹಲವಷ್ಟು ಸವಲತ್ತುಗಳನ್ನು ಒದಗಿಸುತ್ತಿದೆ. ಯಾವೊಬ್ಬ ಮಗುವೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಲಾಖೆಯೂ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಕಾಫಿ ಬೆಳೆಗಾರ ಡಿ.ಪಿ. ಪ್ರೀತಮ್ ಅವರು ಶಾಲೆಗೆ ಬ್ಯಾಂಡ್ ಸೆಟ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಅವರು ಗ್ರಂಥಾಲಯಕ್ಕೆ ಪುಸ್ತಕಗಳು, ಕಾಫಿ ಬೆಳೆಗಾರರಾದ ಉಮಾ ಗಣಪತಿ ಅವರು ಟಿ.ವಿ.ಯನ್ನು ಕೊಡುಗೆಯಾಗಿ ನೀಡಿದರು.
ಇದರೊಂದಿಗೆ ಕಿಂಗ್ಸ್ ಲ್ಯಾಂಡಿAಗ್ ಹೋಂ ಸ್ಟೇ ವತಿಯಿಂದ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು ಸಹಕಾರ ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಹಾನಗಲ್ಲು ಶೆಟ್ಟಳ್ಳಿ ಗ್ರಾಮಾಧ್ಯಕ್ಷ ಉಲ್ಲಾಸ್, ನಾವು ಪ್ರತಿಷ್ಠಾನದ ಸುಮನ ಮತ್ತು ಗೌತಮ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಲಲಿತಾ, ಸಿ.ಆರ್.ಪಿ. ಭಾಗ್ಯಮ್ಮ, ಮುಖ್ಯಶಿಕ್ಷಕ ಬಿ.ಎಂ. ಸತೀಶ್, ಸಹ ಶಿಕ್ಷಕರುಗಳಾದ ಸುಕುಮಾರ್, ಮಂಜುನಾಥ್, ಮಾಜಿ ಸೈನಿಕ ಕೃಷ್ಣಪ್ಪ, ವೆಂಕಟೇಶ್ ಸೇರಿದಂತೆ ಇತರರು ಇದ್ದರು.
ಇದಕ್ಕೂ ಮುನ್ನ ಅರ್ಚಕ ಸುರೇಶ್ ಭಟ್ ಅವರ ನೇತೃತ್ವದಲ್ಲಿ ಶಾಲೆಯಲ್ಲಿ ಶಾರದಾ ಪೂಜೋತ್ಸವ ನಡೆಯಿತು.