ಮಡಿಕೇರಿ, ಮಾ. ೨೧: ದಕ್ಷಿಣ ಭಾರತಕ್ಕೆ ನೀರುಣಿಸುವ ಜೀವನದಿ ಕಾವೇರಿಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆಗಳನ್ನು ಕೈಗೊಂಡಿದ್ದು, ನೀರು ಕಲುಷಿತ ಹಾಗೂ ನದಿಪಾತ್ರಗಳ ಒತ್ತುವರಿ ತಡೆಗೆ ಅಗತ್ಯವಿದ್ದಲ್ಲಿ ತಂಡ ರಚನೆ ಮಾಡಲು ಸಿದ್ಧರಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆಯ ಮಾತುಗಳನ್ನಾಡಿದರು.
ವಿಶ್ವಜಲ ದಿನದ ಅಂಗವಾಗಿ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮದ ಭಾಗವಾಗಿ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಕಾವೇರಿ ತೀರ್ಥ ಕೊಂಡೊಯ್ಯಲು ಆಗಮಿಸಿದ ಸಂದರ್ಭ ಭಾಗಮಂಡಲದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ‘ನಮ್ಮ ನೀರು, ನಮ್ಮ ಹಕ್ಕು’ ಎಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಮೇಕೆದಾಟು ಪಾದಯಾತ್ರೆಯನ್ನು ಕೈಗೊಂಡೆವು. ಕಾವೇರಿ ೫ನೇ ಹಂತ ಕಾರ್ಯರೂಪಕ್ಕೆ ಬಂದಿದೆ. ತಾ. ೨೨ ರಂದು (ಇಂದು) ವಿಶ್ವಜಲ ದಿನ ಹಿನ್ನೆಲೆ ಕಾವೇರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೆಆರ್‌ಎಸ್‌ನಲ್ಲಿ ಕಾವೇರಿ ನಮನ ಕಾರ್ಯಕ್ರಮವನ್ನು ಈಗಾಗಲೇ ಘೋಷಿಸಲಾಗಿದೆ. ಅದರ ಕಾರ್ಯಗತಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ರಾಜ್ಯದ ನೆಲ, ಜಲ, ಇತಿಹಾಸ, ಪರಂಪರೆ ಉಳಿಸಲು ಅಗತ್ಯ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತದೆ. ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಕಾವೇರಿ ಉಳಿವಿಗೆ ಅಗತ್ಯ ಸಲಹೆಗಳನ್ನು ಸ್ವೀಕರಿಸಿ ಕಾರ್ಯಗತಕ್ಕೂ ಕೆಲಸ ಮಾಡುತ್ತೇವೆ ಎಂದರು.
ಇಡೀ ಬೆಂಗಳೂರು ಜನರಿಗೆ ಕಾವೇರಿ ನೀರುಣಿಸಿ ಜನರ ಬದುಕನ್ನು ಹಸನು ಮಾಡುತ್ತಿದೆ. ಕಾವೇರಿಯೇ ಕನ್ನಡಿಗರಿಗೆ ಜೀವನದಿ, ದಕ್ಷಿಣ ಭಾರತದ ಜೀವನಾಡಿಯಾಗಿ ಆಶ್ರಯವಾಗಿದೆ. ಇಲ್ಲಿಂದಲೇ ನಮನ ಸಲ್ಲಿಸಿ ಬೆಂಗಳೂರಿಗೆ ಕಾವೇರಿ ತೀರ್ಥ ಕೊಂಡೊಯ್ದು ಮುಂದಿನ ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನವನ್ನು ಸರಕಾರದ ವತಿಯಿಂದ ನಡೆಸಿ ಜಾಗೃತಿ ಮೂಡಿಸಲಾಗುವುದು. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಅರಿವು ಮೂಡಿಸುವುದೇ ಕಾವೇರಿ ಆರತಿ ಉದ್ದೇಶವಾಗಿದೆ. ಇದು ರಾಜಕೀಯವಲ್ಲ. ಎಲ್ಲರ ಬೆಂಬಲ ಅತೀಮುಖ್ಯವಾಗಿದೆ. ಬದುಕು ಹಸನು ಮಾಡುವ ದೃಷ್ಟಿಯಿಂದ ನಡೆಯುತ್ತಿರುವ ಅಭಿಯಾನ ಇದು ಎಂದು ತಿಳಿಸಿದರು.
ಕಾವೇರಿ ಆರತಿಗೆ ಅನುದಾನ ಮೀಸಲು
ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನಲ್ಲಿ ಕಾವೇರಿ ಆರತಿ ಆಯೋಜಿಸಲು ಈಗಾಗಲೇ ಹಣ ಮೀಸಲಿಡಲಾಗಿದೆ. ಎಷ್ಟು ದಿನಗಳಿಗೆ ಒಮ್ಮೆ ಆರತಿ ಮಾಡಬೇಕು ಎನ್ನುವ ತೀರ್ಮಾನವನ್ನು ಮುಂದೆ ಮಾಡಲಾಗುವುದು. ಆರತಿ ವೇಳೆ ಕೊಡಗಿನ ಕಲಾವಿದರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಮುಜರಾಯಿ, ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು. ನೀರನ್ನು ದುರ್ಬಳಕೆ ಮಾಡುವುದಿಲ್ಲ, ಸುಖಾಸುಮ್ಮನೆ ಖರ್ಚು ಮಾಡಬಾರದು ಎಂದು ಜನರಿಗೆ ಅರಿವು ಮೂಡಿಸಲಾಗುವುದು ಹಾಗೂ ಪ್ರತಿಜ್ಞಾವಿಧಿ ಭೋದಿಸಲಾಗುವುದು. ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ. ಜನರು ಆನ್‌ಲೈನ್ ಮೂಲಕವೂ ನೀರನ್ನು ಉಳಿಸುತ್ತೇನೆ ಎಂದು ಪ್ರತಿಜ್ಞೆ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಹುದು. ಎಲ್ಲಾ ಸಾರ್ವಜನಿಕರು, ರಾಜಕಾರಣಿಗಳು ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪವಿಭಾಗಧಿಕಾರಿ ವಿನಾಯಕ್ ನರ್ವಾಡೆ, ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಕುಮಾರ್, ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಚೆಪ್ಪುಡಿರ ಅರುಣ್ ಮಾಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಚಂದ್ರಕಲಾ, ಹೆಚ್.ಎಂ. ನಂದಕುಮಾರ್, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಮ್ಮಡ ಸೋಮಣ್ಣ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.