ಐಗೂರು, ಮಾ. ೨೨: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಜಂಕ್ಷನ್ ಬಳಿ ಕಾಡಾನೆಯೊಂದು ವಾಹನದ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಬೆಳಗ್ಗಿನ ಜಾವ ೬:೩೦ ಗಂಟೆಗೆ ಮಡಿಕೇರಿ ಕಡೆಯಿಂದ ಸೋಮವಾರಪೇಟೆ ಕಡೆಗೆ ಸಾಗುತ್ತಿದ್ದ ಟೆಂಪೋ ಟ್ರಾಕ್ ಈಚರ್ ವಾಹನವು ಕಾಜೂರು ಅರಣ್ಯ ಪಾಲಕರ ವಸತಿಗೃಹದ ಬಳಿಯ ಹೆದ್ದಾರಿ ರಸ್ತೆಗೆ ತಲುಪಿದಾಗ ಪಕ್ಕದ ಟಾಟಾ ಕಾಫಿ ತೋಟದಲ್ಲಿದ್ದ ಕಾಡಾನೆ ವಾಹನದ ಮೇಲೆ ದಾಳಿ ನಡೆಸಿದೆ. ದಾಳಿಯಿಂದ ವಾಹನದ ಮುಂಭಾಗದ ಗಾಜು ಸಂಪೂರ್ಣ ಪುಡಿಯಾಗಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯು ನಿಡುಗರಹಳ್ಳಿಯ ಎನ್.ಆರ್. ಲೋಕೇಶ್ ಎಂಬವರು ವಾಹನ ಚಲಾಯಿಸುತ್ತಿದ್ದು, ಎರಡು ಕಾಡಾನೆ ಮತ್ತು ಒಂದು ಮರಿಯಾನೆಯ ಹಿಂಡು ದಾಳಿ ನಡೆಸಿದೆ.
ಘಟನಾ ಸ್ಥಳಕ್ಕೆ ಎಸಿಎಫ್ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್, ಗಸ್ತು ಪಡೆಯ ಚಂದ್ರಶೇಖರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳೆದ ತಿಂಗಳು ಈ ಭಾಗದಲ್ಲಿ ದಾಂದಲೆ ನಡೆಸುತ್ತಿದ್ದ ಕಾಜೂರು ಕರ್ಣ ಎಂಬ ಹೆಸರಿನ ಕಾಡಾನೆಯಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದರು. ಆನೆಯನ್ನು ಇಲಾಖೆಯವರು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಬೆನ್ನಲ್ಲೇ ಇಂತಹ ಘಟನೆ ಮರುಕಳಿಸಿರುವುದು ಆತಂಕ ಸೃಷ್ಟಿಸಿದೆ.