ಗೋಣಿಕೊಪ್ಪಲು, ಮಾ.೨೨: ಇಲ್ಲಿನ ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿತ ನೆಸ್‌ಕೆಫೆ ಹಾಕಿ ಕಪ್‌ನಲ್ಲಿ ಬ್ಲೇಜ್ ಮೂರ್ನಾಡು, ಬೊಟ್ಯತ್‌ನಾಡ್ ಕುಂದ ಫೈನಲ್ ಪ್ರವೇಶಿಸಿದೆ. ಮಹದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ ತಂಡದ ವಿರುದ್ಧ ಬ್ಲೇಜ್ ತಂಡವು ೨-೧ ಗೋಲಿನ ಅಂತರದಲ್ಲಿ ಫೈನಲ್ ಪ್ರವೇಶ ಪಡೆಯಿತು. ಎರಡನೇ ಸೆಮಿಫೈನಲ್ಸ್ನಲ್ಲಿ ಬೊಟ್ಯತ್ ನಾಡ್ ಕುಂದ ಹಾಗೂ ಕೊಣನಕಟ್ಟೆ ಎಲೆವನ್ ತಂಡದ ನಡುವೆ ನಡೆಯಿತು. ಈ ಪಂದ್ಯದಲ್ಲಿ ಕೋಣಕಟ್ಟೆ ಇಲೆವನ್ ತಂಡವನ್ನು ೨-೦ ಗೋಲಿನಿಂದ ಸೋಲಿಸುವ ಮೂಲಕ ಬೊಟ್ಯತ್ ನಾಡ್ ಕುಂದ ಎರಡನೇ ತಂಡವಾಗಿ ಫೈನಲ್‌ಗೆ ಪ್ರವೇಶ ಪಡೆಯಿತು. ಅಂತಿಮವಾಗಿ ಬೊಟ್ಯತ್ ನಾಡ್ ಕುಂದ ತಂಡವು ಫೈನಲ್ ಪ್ರವೇಶ ಪಡೆಯಿತು. ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ನೆಸ್ ಕೆಫೆ ಕೊಡಗು ಕಪ್ ಹಾಕಿ ಪಂದ್ಯಾವಳಿಯ ೨ ನೇ ದಿನದ ಕಾರ್ಯಕ್ರಮದಲ್ಲಿ ನೆಸ್ ಕೆಫೆಯ ಪ್ರಮುಖರು ಸೇರಿದಂತೆ ಹಾಕಿ ಕೂರ್ಗ್ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಹಾಕಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಪಂದ್ಯಾವಳಿ ವೀಕ್ಷಣೆ ಮಾಡಿದರು. ತಾ. ೨೩ ರಂದು (ಇಂದು) ಮಧ್ಯಾಹ್ನ ೨.೩೦ಕ್ಕೆ ಫೈನಲ್ ಪಂದ್ಯಾಟ ನಡೆಯಲಿದೆ.

ಚೆಪ್ಪುಡೀರ ಕಾರ್ಯಪ್ಪ ಹಾಗೂ ಚೇಂದ್ರಿಮಾಡ ಬೊಳ್ಳಮ್ಮ ವೀಕ್ಷಕ ವಿವರಣೆ ನೀಡಿದರು. ಪಂದ್ಯಾವಳಿಯ ತೀರ್ಪುಗಾರರಾಗಿ ಅರುಣ್, ಬೊಳ್ಳಚಂಡ ನಾಣಯ್ಯ ,ನೆಲ್ಲಮಕ್ಕಡ ಪವನ್ ಹಾಗೂ ಪಟ್ರಪಂಡ ಮಂದಣ್ಣ ಕಾರ್ಯನಿರ್ವಹಿಸಿದರು. ತಾಂತ್ರಿಕ ವರ್ಗದಲ್ಲಿ ಸುಳ್ಳಿಮಾಡ ಸುಬ್ಬಯ್ಯ, ಚೆಂಗಪ್ಪ, ನಿರ್ವಹಣೆ ಮಾಡಿದರು.