ಐಗೂರು, ಮಾ. ೨೨: ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಬಿಡಿ ರಸ್ತೆಯಲ್ಲಿರುವ ಕರಿಮಾರಿಯಮ್ಮ ದೇವಾಲಯದ ಕರಗ ಪೂಜೋತ್ಸವ ಭಕ್ತಿಪೂರ್ವಕವಾಗಿ ಸಂಪನ್ನಗೊAಡಿತು.

ದುರ್ಗಾ ನಗರದವರ ಸಮ್ಮುಖದಲ್ಲಿ ತಾ. ೧೮ ರಂದು ಕರಗ ಪೂಜೆ ನಡೆಯಿತು. ವ್ರತ ಧಾರಿಗಳಾದ ನಾಗ ಭೂಷಣ್ ಮತ್ತು ಗೌತಮ್ ಕರಗ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರೊಂದಿಗೆ ಸಾಗಿದ ಮೆರವಣಿಗೆಯು ವಿಶೇಷ ಆಕರ್ಷಣೆಯಾಗಿತ್ತು. ತಾ. ೧೯ ರಂದು ಕರಿ ಮಾರಿಯಮ್ಮ ದೇವಾಲಯದಲ್ಲಿ ಅರ್ಚಕ ನರಸಿಂಹ ಅವರ ನೇತೃತ್ವದಲ್ಲಿ ಅಭಿಷೇಕ ಪೂಜೆ, ಪಂಚಾಮೃತ, ದೇವಿಗೆ ಪುಷ್ಪಾಲಂಕಾರ ಸೇವೆಗಳು ನಡೆಯಿತು.

ದೇವಾಲಯದ ಅಧ್ಯಕ್ಷ ಪಾಪಣ್ಣ ಅವರಿಂದ ದೇವಿಗೆ ಪ್ರಭಾವಳಿ ಅರ್ಪಿಸಲಾಯಿತು. ಮಹಾ ಮಂಗಳಾರತಿಯ ನಂತರ ಭಕ್ತರ ಹರಕೆಯ ಕೋಳಿ, ಆಡುಗಳ ಬಲಿ ಪೂಜೆ ಮತ್ತು ಅನ್ನಸಂತರ್ಪಣೆಯ ಕಾರ್ಯಕ್ರಮ ನಡೆಯಿತು. ಸಂಜೆ ವೇಳೆ ಕರಗ ಹೊತ್ತ ವ್ರತಧಾರಿಗಳು ದುರ್ಗಾ ನಗರದ ಗ್ರಾಮಸ್ಥರು ಮೆರವಣಿಗೆಯೊಂದಿಗೆ ಸಾಗಿ ಚೋರನ ಹೊಳೆಯ ಬದಿಯಲ್ಲಿ ಪೂಜೆ ನೆರವೇರಿಸಿ ನದಿಗೆ ಕರಗವನ್ನು ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಪಾಪಣ್ಣ, ಪದಾಧಿಕಾರಿಗಳಾದ ದಿನೇಶ, ಬಸವರಾಜು, ಗಣೇಶ, ಪನ್ನೀರು, ರಾಮಕೃಷ್ಣ, ಮುರುಗ, ಸುಬ್ರಮಣಿ, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.