ಪೊನ್ನಂಪೇಟೆ, ಮಾ. ೨೬: ಗ್ರಾಮ ಪಂಚಾಯಿತಿಯಿAದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಬಜೆಟ್ (ಆಯ-ವ್ಯಯ) ಮಂಡನೆಯಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಚೊಚ್ಚಲ ಮತ್ತು ೨೦೨೫-೨೬ನೇ ಸಾಲಿನ ಬಜೆಟ್ ಮೊತ್ತವು ಒಟ್ಟು ರೂ. ೭,೧೭,೪೮,೦೦೦ ಆಗಿದೆ.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಆಲೀರ ಎಂ. ರಶೀದ್ ಬಜೆಟ್ ಅನ್ನು ಮಂಡಿಸಿದರು. ಪೊನ್ನಂಪೇಟೆಯು ದಿನೇ-ದಿನೇ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಜನತೆಗೆ ಮೂಲಭೂತ ಸೌಕರ್ಯ ಒದಗಿಸುವುದು ಪಟ್ಟಣ ಪಂಚಾಯಿತಿಯ ಆದ್ಯ ಕರ್ತವ್ಯವಾಗಿದೆ. ಪಟ್ಟಣ ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಮೊದಲ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದರು.

೨೦೨೫-೨೬ನೇ ಸಾಲಿನಲ್ಲಿ ಒಟ್ಟು ರೂ. ೭,೦೮,೨೬,೭೨೭ ಮೊತ್ತದ ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಪೈಕಿ ಎಸ್.ಎಫ್.ಸಿ. ವಿಶೇಷ ಅನುದಾನ ರೂ. ೧೫೦ ಲಕ್ಷ, ಎಸ್.ಎಫ್.ಸಿ. ಅನುದಾನ ರೂ. ೭೦ ಲಕ್ಷ, ೧೫ನೇ ಹಣಕಾಸು ಅನುದಾನ ರೂ. ೮೦ ಲಕ್ಷ, ವಿದ್ಯುತ್ ಅನುದಾನ ರೂ. ೭೫ ಲಕ್ಷ, ನೀರಿನ ಅಭಾವ ಅನುದಾನ ರೂ. ೧೦ ಲಕ್ಷ, ಎಸ್.ಎಫ್.ಸಿ. ವೇತನ ಅನುದಾನ ರೂ. ೭೪.೯೦ ಲಕ್ಷ, ಕಟ್ಟಡ ಕಾಯ್ದೆಗಳಿಗೆ ಸಂಬAಧಿಸಿದ ಶುಲ್ಕಗಳು ರೂ. ೫ ಲಕ್ಷ, ಮಾರುಕಟ್ಟೆಗಳ, ವಾಹನ ನಿಲುಗಡೆ ಮತ್ತು ಸಂತೆ ಸುಂಕದ ಹರಾಜಿನ ಆದಾಯ ರೂ. ೭.೫ ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ ರೂ. ೬.೮೬ ಲಕ್ಷ, ಆಸ್ತಿ ತೆರಿಗೆ ರೂ. ೫೧.೫೮ ಲಕ್ಷ, ಉದ್ದಿಮೆ ಪರವಾನಿಗೆ ರೂ. ೫ ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ. ೪.೫ ಲಕ್ಷ, ಪರಿಶಿಷ್ಟ ಜಾತಿ, ಪ.ಪಂ. ಶ್ರೇಯೋಭಿವೃದ್ಧಿ ನಿಧಿಯಿಂದ ರೂ. ೫ ಲಕ್ಷ, ಇತರೆ ಬಡಜನರ ಕಲ್ಯಾಣ ನಿಧಿಯ ಶೇ. ೭.೨೫ ರಂತೆ ರೂ. ೩ ಲಕ್ಷ, ಅಂಗವಿಕಲರಿಗೆ ಶ್ರೇಯೋಭಿವೃದ್ಧಿ ನಿಧಿಯ ಶೇ. ೫ ರಂತೆ ರೂ. ೨ ಲಕ್ಷ ಮತ್ತು ಸ್ವಚ್ಛ್ ಭಾರತ ಯೋಜನೆ ಅನುದಾನದಿಂದ ರೂ. ೫ಲಕ್ಷ ಅನುದಾನದ ನಿರೀಕ್ಷೆ ಹೊಂದಲಾಗಿದೆ ಎಂದು ರಶೀದ್ ಹೇಳಿದರು.

ಪ್ರಸ್ತುತ ಹಣಕಾಸು ಸಾಲಿನಲ್ಲಿ ಒಟ್ಟು ರೂ. ೭,೧೧,೧೦,೦೦೦ ಮೊತ್ತದ ಖರ್ಚನ್ನು ಅಂದಾಜಿಸಲಾಗಿದೆ. (ಮೊದಲ ಪುಟದಿಂದ) ಈ ಪೈಕಿ ನೌಕರರ ವೇತನಕ್ಕೆ ರೂ. ೧.೦೫ ಕೋಟಿ, ೧೫ನೇ ಹಣಕಾಸು ಯೋಜನೆ ಕಾಮಗಾರಿಗಳಿಗಾಗಿ ರೂ. ೮೦ ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ. ೮೬ ಲಕ್ಷ, ನೀರು ಸರಬರಾಜು ಮೂಲಗಳು ಮತು ವಿತರಣಾ ವ್ಯವಸ್ಥೆ ಮತ್ತು ನಿರ್ವಹಣೆಗೆ ರೂ. ೩೫ಲಕ್ಷ, ಬೀದಿ ದೀಪಗಳ ಅಭಿವೃದ್ಧಿಗಾಗಿ ರೂ. ೧೦ ಲಕ್ಷ, ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ರೂ. ೧೫ ಲಕ್ಷ, ನಾಗರಿಕ ವಿನ್ಯಾಸಗಳಿಗಾಗಿ ರೂ. ೫ ಲಕ್ಷ, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ ಕಾಮಗಾರಿಗಳಿಗೆ ರೂ. ೨೦ ಲಕ್ಷ, ಚರಂಡಿಗಳಿಗಾಗಿ (ರಸ್ತೆ ಬದಿ ಮತ್ತು ಮಳೆ ನೀರು ಚರಂಡಿ) ರೂ. ೨೫ ಲಕ್ಷ, ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ರೂ. ೩೦ ಲಕ್ಷ, ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ರೂ. ೨೫ ಲಕ್ಷ, ಕಚೇರಿ ಉಪಕರಣಗಳ ಖರೀದಿಗಾಗಿ ರೂ. ೭ ಲಕ್ಷ, ನೀರು ಸರಬರಾಜು ಮತ್ತು ಬೀದಿ ದೀಪಗಳ ವಿದ್ಯುತ್ ವೆಚ್ಚಕ್ಕೆ ರೂ. ೭೭ ಲಕ್ಷ, ಪರಿಶಿಷ್ಟ ಜಾತಿ, ಪ.ಪಂ. ಶ್ರೇಯೋಭಿವೃದ್ಧಿಗೆ ಯೋಜನೆಗಳಿಗಾಗಿ ರೂ. ೫ ಲಕ್ಷ, ಇತರೆ ಬಡಜನರ ಕಲ್ಯಾಣ ನಿಧಿ ಶೇ. ೭.೨೫ರ ಯೋಜನೆಗಳಿಗೆ ರೂ.೩ ಲಕ್ಷ ಮತ್ತು ಅಂಗವಿಕಲರಿಗೆ ಶ್ರೇಯೋಭಿವೃದ್ಧಿಯ ಶೇ. ೫ರ ಯೋಜನೆಗಳಿಗೆ ರೂ. ೨ ಲಕ್ಷ ಅನುದಾನವನ್ನು ಖರ್ಚು ಮಾಡುವ ಗುರಿ ಹೊಂದಲಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ೨೦೨೫-೨೬ನೇ ಸಾಲಿನ ಆಯ-ವ್ಯಯದ ಘೋಸ್ವಾರೆಯಲ್ಲಿ ಒಟ್ಟು ರೂ. ೬,೩೮,೬೪೧ ಮೊತ್ತದ ಉಳಿತಾಯ ಸಾಧಿಸುವ ಗುರಿಯೂ ಹೊಂದಲಾಗಿದೆ ಎಂದು ರಶೀದ್ ತಿಳಿಸಿದರು. ಸಭೆಯಲ್ಲಿ ಮುಖ್ಯ ಅಧಿಕಾರಿಗಳಾದ ಎಸ್. ಗೋಪಿ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

- ರಫೀಕ್ ತೂಚಮಕೇರಿ